ದೇವರಹಟ್ಟಿ ಕಾರ್ಯಕ್ರಮದಲ್ಲಿ ಬಾಪೂಜಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಂ. ಬಸವರಾಜ್
ದಾವಣಗೆರೆ, ಫೆ. 23 – ಉತ್ತಮ ಶಿಕ್ಷಣದಿಂದ ಉತ್ತಮ ಪ್ರಜೆಯಾಗಲು ಸಾಧ್ಯ. ಎಷ್ಟೇ ಕಷ್ಟಗಳು ಬಂದರೂ ಸಹ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು ಎಂದು ಬಾಪೂಜಿ ಬ್ಯಾಂಕ್ ಪ್ರಧಾನ ವ್ಯವಸ್ಥಾ ಪಕ ಎಂ. ಬಸವರಾಜ್ ಹೇಳಿದರು.
ತಾಲ್ಲೂಕಿನ ದೇವರಹಟ್ಟಿ ಗ್ರಾಮ ದಲ್ಲಿರುವ ಮೊಹದ್ದಿಸೆ – ಏ – ಆಜಾಂ ಮಿಷನ್ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.
ತೀವ್ರ ಬಡತನ ಎದುರಿಸುತ್ತಿ ರುವ ಕುಟುಂಬಗಳು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಿ ಕೂಲಿ, ಗಾರೆ ಕೆಲಸ ಸೇರಿದಂತೆ ಇನ್ನಿತರೆ ಕೆಲಸಕ್ಕೆ ಕಳುಹಿಸಿ ಮಕ್ಕಳ ಜೀವನ ಹಾಳು ಮಾಡಬಾರದು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅವರನ್ನು ವಿದ್ಯಾವಂತರನ್ನಾಗಿ ರೂಪಿಸಬೇಕು ಎಂದರು.
ತಂಜೀಮ್ ಸಮಿತಿ ಮಾಜಿ ಉಪಾಧ್ಯಕ್ಷ ಅಲ್ಲಾವಲಿ ಇನಾಯತ್ ಉಲ್ಲಾ ಖಾನ್ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ, ಈ ನಿಟ್ಟಿನಲ್ಲಿ ತಾಯಿಯ ಪಾತ್ರ ಮಹತ್ವದ್ದು, ಹಾಗಾಗಿ ಮಕ್ಕಳಿಗೆ ಉತ್ತಮ ಬಾಂಧವ್ಯದೊಂದಿಗೆ ಕಲಿಸುವ ಪಾಠ ಜೀವನ ಪರ್ಯಂತ ಉಳಿಯಲಿದೆ ಎಂದರು.
ಪತ್ರಕರ್ತ ಬಿ. ಸಿಕಂದರ್ ಮಾತನಾಡಿ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಉತ್ಸುಕರಾಗಿರುವ ಪೋಷಕರು, ತಮ್ಮ ಮಕ್ಕಳ ವ್ಯಾಸಂಗದ ಪ್ರಗತಿಗೆ ಗಮನ ಹರಿಸುವುದೂ ಅಷ್ಟೇ ಮುಖ್ಯ. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಎಂ.ಬಿ. ಸನಾವುಲ್ಲಾ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಆವಲೋಕಿಸಿ ಮಕ್ಕಳಿಗೆ ಅನುಕೂಲವಾಗಲೆಂದು ಕಡಿಮೆ ಪ್ರವೇಶ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ ಎಂದು ಹೇಳಿದ ಅವರು, ಬಡವರನ್ನು ಗುರುತಿಸಿ ದತ್ತು ಪಡೆದು ಶಿಕ್ಷಣ ನೀಡುತ್ತಿದ್ದೇವೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಡಾ. ಉಸ್ಮಾನ್ ಸಾಬ್, ಜಂಟಿ ಕಾರ್ಯದರ್ಶಿ ಎಂ.ಬಿ.ಎಸ್. ಅಜ್ಮತ್‌ವುಲ್ಲಾ, ಖಜಾಂಚಿ ಟಿ.ಕೆ.ಅಬ್ದುಲ್ಲಾ, ಟ್ರಸ್ಟಿಗಳಾದ ಸೈಯದ್ ಜಾವೀದ್, ಮಲ್ಲಿಗೆ ಆರೀಫ್ ಉಲ್ಲಾ, ದೇವರಹಟ್ಟಿ ಇಮಾಂಸಾಬ್, ಅಕ್ಬರ್ ಸಾಬ್, ಸಹಶಿಕ್ಷಕಿಯರಾದ ಅಫ್ರೀನ್ ತಾಜ್, ಸಲ್ಮಾ, ಅಷಿಯಾನಾ, ತಸ್‌ಮೀನ್ ಬಾನು, ನಾಜೀಮಾ, ಹಮೀದಾ ಬಾಜಿ, ಮುಸ್ಕಾನ್ ಇದ್ದರು.