ಸೇಂಟ್‌ಜಾನ್ಸ್ ಶಾಲೆಯ ಕಾರ್ಯಕ್ರಮದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ನಲವಾಗಲು ಮಂಜುನಾಥ
ದಾವಣಗೆರೆ, ಫೆ. 21 – ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಾಗಲು ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ನಲವಾಗಲು ಮಂಜುನಾಥ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಸೇಂಟ್‌ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋಣೆ ಮಗು ಕೊಳಿತು ; ಬೀದಿ ಮಗು ಬಲಿತು ಎಂಬ ಗಾದೆ ಮಾತನ್ನು ನಿದರ್ಶನ ನೀಡಿ, ಕಲಿಕೆ ಎಂದರೆ ಕೇವಲ ಅಕ್ಷರ ಮಾತ್ರವಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್. ಅನಿಲ್‌ಕುಮಾರ್, ಕಾರ್ಯದರ್ಶಿ ಟಿ.ಎಮ್ ಉಮಾಪತಯ್ಯ, ಖಜಾಂಚಿ ಪ್ರವೀಣ್ ಹುಲ್ಲುಮನೆ ಉಪಸ್ಥಿತರಿದ್ದರು.
ಕ್ರೀಡಾ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಸಯ್ಯದ್ ಆರಿಫ್ ಆರ್. ಅವರು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.
ಶಾಲಾ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಾಂಶುಪಾಲರಾದ ಶ್ರೀಮತಿ ಪ್ರೀತಾ. ಟಿ. ರೈ, ಉಪ ಪ್ರಾಂಶುಪಾಲರಾದ ಶ್ರೀಮತಿ ಎಸ್. ಎಮ್. ನೇತ್ರಾವತಿ, ಸಂಯೋಜಕರಾದ ಎಂ.ಎಸ್. ರೂಪ ಹಾಗೂ ಇತರರು ಪಾಲ್ಗೊಂಡಿದ್ದರು.