ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲಾ ಕಾರ್ಯಕ್ರಮದಲ್ಲಿ ರವಿನಾರಾಯಣ್
ದಾವಣಗೆರೆ, ಜ. 21- ಪ್ರಾಥಮಿಕ ಶಿಕ್ಷಣ ಉಚಿತ ಹಾಗೂ ಕಡ್ಡಾಯವಾಗಿದ್ದು, ಕೊಂಡುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮರಕ್ಕೆ ಬೇರು, ಕಟ್ಟಡಕ್ಕೆ ಬುನಾದಿ ಎಷ್ಟು ಮುಖ್ಯವೋ ಹಾಗೆಯೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದೆ ಎಂದು ವಿಶ್ರಾಂತ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ್ ತಿಳಿಸಿದರು.
ಸ್ಥಳೀಯ ಕುವೆಂಪು ಕನ್ನಡ ಭವನದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಜಯನಗರ `ಎ’ ಬ್ಲಾಕ್ನಲ್ಲಿರುವ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಮೂಲಕ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ವಿಶೇಷವಾಗಿ ಜನನಿ ತಾನೇ ಮೊದಲ ಗುರು ಎಂಬಂತೆ ಮಕ್ಕಳ ಭವ್ಯ ಭವಿಷ್ಯ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದ್ದು, ಮಕ್ಕಳಲ್ಲಿ ಶಿಸ್ತು ರೂಪಿಸುವುದರ ಜೊತೆಗೆ, ಸಮರ್ಪಣಾ ಭಾವನೆಯೊಂದಿಗೆ ಮಕ್ಕಳ ದೊಡ್ಡ ದೊಡ್ಡ ಕನಸನ್ನು ನನಸಾಗಬೇಕೆಂದು ರವಿನಾರಾಯಣ್ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ, ಅತ್ಯಂತ ಕಡಿಮೆ ಶುಲ್ಕ ಪಡೆದು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರಿಸುವುದರ ಮೂಲಕ ಸಂಸ್ಥೆಯನ್ನು ಅಭಿವೃದ್ಧಿಪಡಿಸಬೇಕೆಂದು ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ನ್ಯಾಯವಾದಿ ಬಿ.ಎಂ. ಹನುಮಂತಪ್ಪ ಮಾತನಾಡಿ, ಡಾ. ಅಂಬೇಡ್ಕರ್ ಅವರು ಬಾಲ್ಯದಲ್ಲಿ ತುಂಬಾ ಕಷ್ಟ ಅನುಭವಿಸಿ ಹಲವು ಪದವಿ ಪಡೆಯುವುದರ ಮೂಲಕ ಉನ್ನತ ಶಿಕ್ಷಣ ಪಡೆದರು. ಮಾನವನ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಅತಿ ಮುಖ್ಯವಾಗಿದ್ದು, ಪೋಷಕರು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕೆಂದರು.
ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಕೆ.ಬಿ. ಆನಂದ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ನಂಬಿಕೆ ಹೊಂದದೆ, ಅವರ ಚಲನವಲನಗಳ ಬಗ್ಗೆ ಗಮನ ನೀಡಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ಸಂಸ್ಥಾಪಕರೂ ಆದ ವಿಶ್ರಾಂತ ಡಿಡಿಪಿಐ ರುದ್ರಮುನಿ ಮಾತನಾಡಿ, ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂದು ಹೇಳಿದರು. ಕಳೆದ ಎರಡು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಬಂದಿದ್ದು, ಶ್ರಮ ವಹಿಸಿದ ಶಿಕ್ಷಕರಿಗೆ ವಂದನೆ ಸಲ್ಲಿಸಿದರು.
ಶಾಲೆಯ ಕಾರ್ಯದರ್ಶಿ ಮಂಜುನಾಥ ಹೆಗಡೆ ಉಪಸ್ಥಿತರಿದ್ದರು. ಶ್ರೀಮತಿ ವಂದನಾ ಕುಲಕರ್ಣಿ ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಆರ್. ಮೀನಾಕ್ಷಿ ಸ್ವಾಗತಿಸಿದರು. ಶಿಕ್ಷಕ ರೇಣುಕಾರಾಧ್ಯ ವಾರ್ಷಿಕ ವರದಿ ವಾಚಿಸಿದರು. ಶ್ರೀಮತಿ ಶಕುಂತಲಾ ವಂದಿಸಿದರು. ಶ್ರೀಮತಿ ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು.