ದಾವಣಗೆರೆ, ಫೆ. 21- ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೈಗೊಂಡಿರುವ ಪ್ರಧಾನಮಂತ್ರಿ ಆವಾಜ್ ಯೋಜನೆಯ ಅಡಿಯಲ್ಲಿ (ಸರ್ವರಿಗೂ ಸೂರು) ನಿರ್ಮಿಸುತ್ತಿರುವ ಮನೆಗಳ, ಕೊಳಗೇರಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ, ಕೊಳಚೆ ಪ್ರದೇಶಗಳನ್ನು ಗುರುತಿಸಿ, ಘೋಷಣೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಉಪ ವಿಭಾಗದ ಕಚೇರಿಯಲ್ಲಿ ಇಂದು ಸಭೆ ನಡೆಯಿತು.
ಈ ಸಂಬಂಧ ಕೊಳಗೇರಿ ಅಭಿವೃದ್ಧಿ ಮಂಡಳಿ ವಿಭಾಗ ಕಛೇರಿ ಹಾಗೂ ಉಪ ವಿಭಾಗ ಕಛೇರಿಯ ಅಧಿಕಾರಿ ಮತ್ತು ನೌಕರರುಗಳೊಂದಿಗೆ ಬೆಂಗಳೂರಿನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಡಾ. ಡಿ.ಆರ್. ಅಶೋಕ್ ಅವರು ಸಭೆಯಲ್ಲಿ ಪಾಲ್ಗೊಂಡು ನಿರ್ದೇಶನ ನೀಡಿದರು. ನಿಗದಿತ ಕಾಲಾವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಲು ಅಶೋಕ್ ಸೂಚಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಖ್ಯ ಅಭಿ ಯಂತರ ಹೆಚ್.ಪಿ. ಸುಧೀರ್, ಮಂಡಳಿ ನಿರ್ದೇಶಕರುಗಳಾದ ರಶೀದ್, ವಿನಯ್ ಕುಮಾರ್ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮುನಿರಾಜ್ ಎಇಇ, ಟಿ.ಎಂ. ನಾಗರಾಜು ಮತ್ತು ಇತರರು ಉಪಸ್ಥಿತರಿದ್ದರು.