ದಾವಣಗೆರೆ, ಫೆ. 21- ನಗರದ ರೈಲ್ವೆ ನಿಲ್ದಾಣದಲ್ಲಿ ಮೈಸೂರು ವಿಭಾಗದ ರೈಲ್ವೆ ಸಿಬ್ಬಂದಿಗಾಗಿ ವಿಪತ್ತು ನಿರ್ವಹಣಾ ಕಾರ್ಯಾಗಾರ ಇಂದು ನಡೆಯಿತು.
ದಾವಣಗೆರೆ ಜಿಲ್ಲೆಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನಾಗೇಶ್ ಎಂ.ಎನ್. ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ತಂಡದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಾಲಿಂಗಪ್ಪ ಎಂ. ಲಂಗೋಟಿ ಅವರುಗಳು, ಬೆಂಕಿಯಿಂದ ಆಗುವ ಅನಾಹುತಗಳು, ಅಗ್ನಿ ಸುರಕ್ಷತೆ, ಮುನ್ನೆಚ್ಚರಿಕೆಗಳು ಮತ್ತು ಬೆಂಕಿ ನಿರ್ವಹಿಸುವಾಗ ತೆಗೆದುಕೊಳ್ಳ ಬೇಕಾದ ಕ್ರಮಗಳ ಕುರಿತು ತರಬೇತಿ ನೀಡಿದರು.
ಅಗ್ನಿಶಾಮಕ ರಕ್ಷಣಾ ಸಾಧನಗಳನ್ನು ಪ್ರದರ್ಶಿಸಿಸುವ ಮೂಲಕ ವಿಪತ್ತು ಸಂದರ್ಭಗಳಲ್ಲಿ ಹೇಗೆ ನಿರ್ವಹಣೆ ಮಾಡಲಾಗುತ್ತದೆ ಎಂದು ಹಾಗು ಮೂಲಭೂತ ಅಗ್ನಿಶಾಮಕ ಕವಾಯತ್ತು ಗಳು, ರಕ್ಷಣಾ ಕಾರ್ಯಾಚರಣೆಗಳನ್ನು ಹೇಗೆ ಪ್ರಾಯೋಗಿಕವಾಗಿ ಮಾಡಬ ಹುದು ಎಂಬುದನ್ನು ಪ್ರದರ್ಶಿಸಿದರು. ಹಾಗೂ ಗರಿಷ್ಠ ಜೀವಗಳನ್ನು ಉಳಿಸುವಲ್ಲಿ ಸಾರ್ವಜನಿಕರು ತಮ್ಮ ಪಾತ್ರವನ್ನು ಹೇಗೆ ಮಾಡಬಹುದು ಎಂಬುದನ್ನು ಅವರು ವಿವರಿಸಿದರು.
ಮೈಸೂರು ರೈಲ್ವೆ ರಕ್ಷಣಾ ಪಡೆಯ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಸ್ಯಾಮ್ ಪ್ರಶಾಂತ್, ಮೈಸೂರು ವಿಭಾಗೀಯ ಸುರಕ್ಷತಾ ಅಧಿಕಾರಿ ಸಂದೀಪ್ ವರ್ಮಾ, ಶಿವಮೊಗ್ಗ – ದಾವಣಗೆರೆಯ ಪೋಸ್ಟ್ ಕಮಾಂಡರ್ ಬಿ.ಕೆ. ಪ್ರಕಾಶ್ ನೇತೃತ್ವದಲ್ಲಿ, ವಿವಿಧ ಇಲಾಖೆಗಳಿಂದ (ಕಾರ್ಯಾಚರಣೆ, ಎಂಜಿನಿಯರಿಂಗ್, ಟಿಆರ್‌ಡಿ, ವಿದ್ಯುತ್, ದೂರಸಂಪರ್ಕ, ಸುರಕ್ಷತೆ, ಜಿಆರ್‌ಪಿ, ವಾಣಿಜ್ಯ ಮತ್ತು ಆರ್‌ಪಿಎಫ್) ಸುಮಾರು 100 ರೈಲ್ವೆ ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸ್ಥಳೀಯ ರೈಲ್ವೆ ರಕ್ಷಣಾ ಪಡೆಯ ಶ್ರೀಮತಿ ಲಕ್ಷ್ಮಿ ಬಸವರಾಜ್ ಮತ್ತು ಇತರರು ಉಪಸ್ಥಿತರಿದ್ದರು.