ರಾಣೇಬೆನ್ನೂರು : ಖಾತೆಗೆ ಬೆಳೆ ವಿಮೆ ಹಣ ಜಮೆ ಆಗದಿದ್ದರೆ ಹೋರಾಟ

ರಾಣೇಬೆನ್ನೂರು : ಖಾತೆಗೆ ಬೆಳೆ ವಿಮೆ ಹಣ ಜಮೆ ಆಗದಿದ್ದರೆ ಹೋರಾಟ

ರಾಣೇಬೆನ್ನೂರು, ಫೆ.21- ತಾಲ್ಲೂಕಿನ ರೈತರಿಗೆ ಜಮೆ ಆಗಬೇಕಿದ್ದ ಸುಮಾರು 50 ಕೋಟಿಯಷ್ಟು ಬೆಳೆ ವಿಮೆ ಹಣ ಬಾಕಿ ಇದ್ದು, ತಿಂಗಳೊಳಗಾಗಿ ರೈತರ ಖಾತೆಗೆ ಹಣ ಜಮೆ ಮಾಡದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಿದ್ದೇವೆ ಎಂದು ಜಿ.ಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಸಂತೋಷ್‌ ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ 2023-24 ಸಾಲಿನ 29,117 ಫಲಾನುಭವಿಗಳ ಖಾತೆಗೆ ತಲಾ ಶೇ.25 ರಂತೆ 16.87 ಲಕ್ಷದಷ್ಟು ಹಣ ಜಮಾ ಮಾಡಿದ್ದರು ಎಂದರು.

ಹಾವೇರಿ ಜಿಲ್ಲಾಧಿಕಾರಿಗಳ ಬಳಿ ಇರುವ ಬಾಕಿ 50 ಕೋಟಿ ಹಣವನ್ನು ರೈತರಿಗೆ ಕೊಡುವಲ್ಲಿ ನಮ್ಮ ಶಾಸಕ ಪ್ರಕಾಶ ಕೋಳಿವಾಡರಾಗಲೀ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರಾಗಲೀ ಕ್ರಮ ಜರುಗಿಸದಿರುವುದು ಖಂಡನೀಯ ಎಂದರು.

2 ವರ್ಷಗಳಿಂದ ಜಿಲ್ಲೆ ಹಾಗೂ ತಾಲ್ಲೂಕಿನ ಕೆಡಿಪಿ ಸಭೆಗಳಲ್ಲಿ ಈ ಕುರಿತು ಚೆಕಾರ ಎತ್ತದಿರುವ ನಮ್ಮ ಪ್ರತಿನಿಧಿಗಳ  ವರ್ತನೆ ಈ ಸರ್ಕಾರದ ವೈಫಲ್ಯ. ಪ್ರಕೃತಿ ವಿಕೋಪ ಹಾಗೂ ಹಲವು ಕಾರಣಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕುವ ರೈತ ಸಮುದಾಯವನ್ನು ಅಲಕ್ಷಿಸುತ್ತಿರುವುದು ವಿಷಾದಕರ ಸಂಗತಿ. ಈ ಬಗ್ಗೆ ರೈತರು ಸಿಡಿದೇಳುವ ಮೊದಲೇ ಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು. ಯಾವುದೇ ರಾಜಕೀಯ ಪಕ್ಷಗಳಾಗಲೀ ಭಿನ್ನಾಭಿಪ್ರಾಯ ಇರುವುದು ಸಹಜ. ಆದರೆ ಅವುಗಳು ಅತೀ ಆದಾಗ ಪಕ್ಷದ ಕಾರ್ಯಕರ್ತರ ಮೇಲೆ ಪ್ರಭಾವ ಬೀರಿ, ಪಕ್ಷ ಸಂಘಟನೆ ಕುಂಟಿತಗೊಳ್ಳುತ್ತದೆ. ಪಕ್ಷದ ಹಿರಿಯರು ಈ ಬಗ್ಗೆ ಚಿಂತನೆ ನಡೆಸಿ ಯೋಗ್ಯ ಕ್ರಮ ಕೈಗೊಳ್ಳುವರು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

error: Content is protected !!