ಮಲೇಬೆನ್ನೂರು, ಫೆ.20- ಮಲ್ಲನಾಯ್ಕನಹಳ್ಳಿ ಬಳಿ ಇರುವ ಶ್ರೀನಿವಾಸ ನಗರ ಕ್ಯಾಂಪಿನ `ಐಕಾಂತಿಕ’ ಸಹಜ ಕೃಷಿ ವನದಲ್ಲಿ ದಾವಣಗೆರೆಯ ಸಹಜ ಕೃಷಿ ಬಳಗದ ವತಿಯಿಂದ ಭಾನುವಾರ `ಅಚ್ಚರಿ ಗಡಿಗೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗುಜರಾತ್‌ನ ಸೂರತ್‌ನಿಂದ ಆಗಮಿಸಿದ್ದ ಅನುಭವಿ ತಜ್ಞ ದಂಪತಿ ಶ್ರೀಮತಿ ಸೆಜಲ್ ಮತ್ತು ನಿಕಿಲ್ ಪಟೇಲ್ ಅವರು `ಸ್ವಾಶಿಕ್ಷಣ’ ಪದ್ಧತಿಯ ಕುರಿತು ಪೋಷಕರೊಂದಿಗೆ ಸಂವಾದ ನಡೆಸಿದರು. ಅಲ್ಲದೇ ಅವರು ತಮ್ಮ ಮಕ್ಕಳ ಸ್ವಾಶಿಕ್ಷಣ ಪದ್ಧತಿಯ ಅನುಭವಗಳನ್ನು ಹಂಚಿಕೊಂಡರು.
ನಾವು ನಮ್ಮ ಮಕ್ಕಳನ್ನು ಮೊದಲು ಅರ್ಥಮಾಡಿಕೊಳ್ಳಬೇಕು, ನಂತರ ಅವರ ಜಿಜ್ಞಾಸೆಗಳಿಗೆ ಬೆಂಬಲ ನೀಡಬೇಕು, ಸ್ವಾಶಿಕ್ಷಣದಲ್ಲಿ ನಾವು ಮಕ್ಕಳಿಗೆ ಸಮಯ ಹಾಗೂ ಸ್ವಾತಂತ್ರ್ಯವನ್ನು ನೀಡುವುದರಿಂದ ಅವರು ಅದ್ಭುತಗಳನ್ನು ಸೃಷ್ಟಿಸಲು ಸಹಾಯವಾಗುತ್ತದೆ. ಈಗಿನ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಸಮಯ ಹಾಗೂ ಸ್ವಾತಂತ್ರ್ಯವನ್ನು ನೀಡುವುದಿಲ್ಲ. ಆದ್ದರಿಂದ ಮಕ್ಕಳು ಅವರ ಆಸಕ್ತಿ, ಜಿಜ್ಞಾಸೆ ಮತ್ತು ಬಹು ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಶ್ರೀಮತಿ ಸೆಜಲ್ ಮತ್ತು ನಿಕಿಲ್ ಪಟೇಲ್ ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಳಗದ ಸದಸ್ಯರು, ಮಧ್ಯಾಹ್ನದ ಊಟಕ್ಕೆ ತಮ್ಮ ಮನೆಗಳಿಂದ ವಿಷಮುಕ್ತ ಆಹಾರವನ್ನು ತಯಾರಿಸಿ ತಂದಿದ್ದರು. ಅದನ್ನು ಎಲ್ಲರ ಜೊತೆ ಹಂಚಿಕೊಂಡು `ಅಚ್ಚರಿ ಗಡಿಗೆ’ ಯ ಬೊಂಬಾಟ್ ಊಟ ಆಸ್ವಾದಿಸಿದರು. ಈ ಮೂಲಕ ಎಲ್ಲರ ತಟ್ಟೆಯಲ್ಲಿ ವಿವಿಧ ರುಚಿಕರ ಹಾಗೂ ಆರೋಗ್ಯಕರ ಭೋಜನ ಗಮನ ಸೆಳೆಯಿತು.
ಅಪರಾಹ್ನದ ಸಮಯದಲ್ಲಿ `ಚೌಕ ಬಾರ’ ತರಕಾರಿ ಬೆಳೆಯುವ ಪದ್ಧತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಏರು ಮಡಿ ಮಾಡಲು ಅಲ್ಲಿ ನೆರೆದಿದ್ದ ಮಕ್ಕಳು, ಹಿರಿಯರು ಇದ್ದ ಕುಟುಂಬದ ಸದಸ್ಯರೆಲ್ಲರೂ ಉತ್ಸಾಹದಿಂದ ಮಣ್ಣಿನಲ್ಲಿ ಕೆಲಸ ಮಾಡುವ ಅದ್ಭುತ ಅನುಭವವನ್ನು ಪಡೆದರು. ಈ ವೇಳೆ ಐವತ್ತಕ್ಕೂ ಹೆಚ್ಚಿನ ತರಹದ ಪಾರಂಪರಿಕ ತಳಿಗಳ ತರಕಾರಿ, ಹಣ್ಣು – ಹಂಪಲ, ಔಷಧಿ ಸುಗಂಧ ದ್ರವ್ಯದ ಗಿಡಮೂಲಿಕೆ, ಎಣ್ಣೆಕಾಳು, ಗೆಡ್ಡೆಗೆಣಸು ಮತ್ತು ಅಲಂಕಾರಿಕ ಸಸ್ಯಗಳ ಬೀಜಗಳನ್ನು ಬಿತ್ತಿದರು. ಈ ಪದ್ದತಿಯಿಂದ ಯಾವುದೇ ರೀತಿಯ ಗೊಬ್ಬರ ಮತ್ತು ಕೀಟನಾಶಕ ಬಳಸುವ, ಉಳಿಮೆ ಮಾಡುವ ಅಗತ್ಯವಿಲ್ಲ ಹಾಗೂ ಈ ವಿಧಾನ ನಿರಂತರ ಬೆಳೆ, ಕಡಿಮೆ ಶ್ರಮ, ರೋಗ ಮತ್ತು ಕೀಟಬಾಧೆ ನಿರೋಧಕವಾಗಿ ಬೆಳೆಯಲು ಸೂಕ್ತವಾಗಿದೆ. ಈ ಕಾರ್ಯಕ್ರಮವು ನೈಸರ್ಗಿಕ ಕೃಷಿಯ ಬಗ್ಗೆ ಸಾಕಷ್ಟು ಜ್ಞಾನ ಮತ್ತು ಅನುಭವವನ್ನು ನೀಡಿತು ಎಂದು ಪಾಲ್ಗೊಂಡುವರು ಖುಷಿ ಪಟ್ಟರು.
ಸಂಪೂರ್ಣ ಕಾರ್ಯಕ್ರಮಗಳು ನೈಸರ್ಗಿಕ ಕೃಷಿಕ ರಾಘವ ಮತ್ತು ಐಕಾಂತಿಕ ಸಮುದಾಯದ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದವು.