ನಗರದಲ್ಲಿ ಇಂದು
ದಾವಣಗೆರೆ, ಫೆ.20- ರಾಮಕೃಷ್ಣ ಮಿಷನ್ ವತಿಯಿಂದ ನಗರದ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸಮುದಾಯ ಭವನದಲ್ಲಿ ನಾಳೆ ದಿನಾಂಕ 21ರ ಶುಕ್ರವಾರ ಬೆಳಿಗ್ಗೆ 9ರಿಂದ ರಾತ್ರಿ 8.30ರ ವರೆಗೆ ಯುವಕರು, ಶಿಕ್ಷಕರು ಹಾಗೂ ಭಕ್ತರಿಗಾಗಿ 3 ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಿಷನ್ ಕಾರ್ಯದರ್ಶಿ ಶ್ರೀ ಸ್ವಾಮಿ ತ್ಯಾಗೀಶ್ವರಾನಂದರು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಬೆಳಿಗ್ಗೆ 9ರಿಂದ 12ರ ವರೆಗೆ ಯುವ ಕರಿಗಾಗಿ ಸಮಾವೇಶ (ವಿವೇಕ ಚಿಂತನೆ) ಕಾರ್ಯಕ್ರಮ ನಡೆಯಲಿದ್ದು, ನಗರದ 15 ಕಾಲೇಜಿನ 500 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
`ವಿದ್ಯಾರ್ಥಿಗಳಿಗೆ ಅಭ್ಯಾಸ ಮತ್ತು ವೈರಾಗ್ಯ ಮರ್ಮ’ ಕುರಿತು ಸ್ವಾಮಿ ಮಹಾಮೇದಾನಂದಜೀ ಪ್ರವಚನ ನೀಡುವರು ಹಾಗೂ ಜಗನ್ನಾಥ್ ನಾಡಿಗೇರ್ ಅವರು `ಯೋಗ್ಯ ದಿನಚರಿಯಿಂದ ಮಾತ್ರ ಯಶಸ್ಸು ಸಾಧ್ಯ’ ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು. ಮಧ್ಯಾಹ್ನ 3ರಿಂದ 5ರ ವರೆಗೆ ಶಿಕ್ಷಕರಿಗಾಗಿ ಪ್ರಬುದ್ಧ ಚಿಂತನಾಗೋಷ್ಠಿ ಹಮ್ಮಿಕೊಂಡಿದ್ದು, ಪ್ರಾಥಮಿಕ ಹಿರಿಯ-ಕಿರಿಯ ಹಾಗೂ ಪ್ರೌಢ ಶಾಲೆಯ 300 ಶಿಕ್ಷಕರು ಭಾಗವಹಿಸಲಿದ್ದಾರೆ.
`ಸ್ವಯಂ ಅನುಷ್ಠಾನ ಮಾತ್ರ ಶಿಕ್ಷಕನನ್ನು ಪ್ರೇರಣಾದಾಯಕ ಗುರು ಪದವಿಗೇರಿಸ ಬಲ್ಲದು ಎಂಬ ವಿಷಯ ಕುರಿತು ಸ್ವಾಮಿ ಮಹಾಮೇಧಾನಂದಜೀ ಉಪನ್ಯಾಸ ನೀಡುವರು. ಜಗನ್ನಾಥ ನಾಡಿಗೇರ್ `ಕಲಿಸುವ ವಿಷಯ ಮತ್ತು ವಿದ್ಯಾರ್ಥಿಗಳನ್ನು ಪ್ರೀತಿಸುವವರು ಮಾತ್ರ ಯೋಗ್ಯ ಶಿಕ್ಷಕನಾಗಬಲ್ಲ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಬೆಂಗಳೂರಿನ ವಿವೇಕ ಹಂಸ ಬಳಗದವರಿಂದ ಸಂಜೆ 6ರಿಂದ 8.30ರ ವರೆಗೆ ಭಕ್ತರಿಗಾಗಿ
ರಸಗಂಗೆ ಕಾರ್ಯಕ್ರಮ ಹಾಗೂ ನಿತ್ಯಸ್ಥಾನಂದಜೀ ಮತ್ತು ಮುಕ್ತಿದಾನಂದಜೀ ಅವರು ಆಶೀರ್ವಚನ ನೀಡುವರು.