ನಗರಸಭೆ 1.74 ಕೋಟಿ ರೂ. ಉಳಿತಾಯ ಬಜೆಟ್

ನಗರಸಭೆ 1.74 ಕೋಟಿ ರೂ. ಉಳಿತಾಯ ಬಜೆಟ್

ರಾಣೇಬೆನ್ನೂರಿನ ವೃತ್ತಗಳ ಅಭಿವೃದ್ಧಿ, ಸಿಸಿ ಕ್ಯಾಮರಾಗಳ ಅಳವಡಿಕೆ, ಬೀದಿ ವ್ಯಾಪಾರಸ್ಥರಿಗೆ ಸೌಲಭ್ಯ, ಕ್ರೀಡೆಗಳಿಗೆ ಪ್ರೋತ್ಸಾಹ.

– ಚಂಪಕ ಬಿಸಲಳ್ಳಿ, ಅಧ್ಯಕ್ಷರು, ನಗರಸಭೆ, ರಾಣೇಬೆನ್ನೂರು

ರಾಣೇಬೆನ್ನೂರು, ಫೆ.20- ಬಾಕಿ ಉಳಿದ 9 ತಿಂಗಳ ಅವಧಿಗೆ ಅಧ್ಯಕ್ಷ ಗಾದಿಯಲ್ಲಿ ಕುಳಿತಿರುವ ಚಂಪಕ ಬಿಸಲಳ್ಳಿ ಅವರು ತಮ್ಮ ಮೊದಲ ಸಭೆಯಲ್ಲಿಯೇ 2025ರ ಆಯ-ವ್ಯಯ ಮಂಡಿಸಿ, 1.74 ಕೋಟಿ ರೂ. ಉಳಿತಾಯ ಮಾಡುತ್ತಿರುವುದಾಗಿ ಘೋಷಿಸಿದರು.

ಈ ವೇಳೆ ವೇದಿಕೆಯಲ್ಲಿದ್ದ ಶಾಸಕ ಪ್ರಕಾಶ ಕೋಳಿವಾಡ ಸೇರಿದಂತೆ, ಉಪಾಧ್ಯಕ್ಷ ನಾಗರಾಜ ಪವಾರ, ಪೌರಾಯುಕ್ತ ಪಕ್ಕೀರಪ್ಪ ಇಂಗಳಗಿಳ ಹಾಗೂ ಸರ್ವ ಸದಸ್ಯರು ಅಧ್ಯಕ್ಷರ ಘೋಷಣೆಗೆ ಸ್ಪಂದಿಸಿ, ಟೇಬಲ್ ಭಾರಿಸಿ ಸ್ವಾಗತಿಸಿದರು.

ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಆಸ್ಪತ್ರೆ, ಶಿಕ್ಷಣ, ವ್ಯವಹಾರ, ಉದ್ಯೋಗ, ಕಚೇರಿ ಕೆಲಸಗಳಿಗಾಗಿ ಪ್ರತಿದಿನ ಸಾವಿರಾರು ಜನರು ಬಂದು ಹೋಗುತ್ತಿದ್ದಾರೆ. ಅವರಿಗೆ ಹಾಗೂ ನಗರದ ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಗರ ಸಭೆಯ ಆದ್ಯ ಕರ್ತವ್ಯವಾಗಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು, ನಾಗರಿಕರ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಬಜೆಟ್ ಮಂಡಿಸಿರುವುದಾಗಿ ಅಧ್ಯಕ್ಷೆ ಚಂಪಕ ವಿವರಿಸಿದರು.

ನಗರಸಭೆ ಮಾಲ್ಕಿ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ ಹಾಗೂ ಇತರೆ ಶುಲ್ಕಗಳ 22 ಕೋಟಿ  ಜೊತೆಗೆ ಎಸ್.ಎಫ್.ಸಿ ನಿಧಿ, ವಿದ್ಯುತ್ ಅನುದಾನ, ವೇತನ ಅನುದಾನ, ಕೇಂದ್ರದ ಹಣಕಾಸು ಯೋಜನೆ ಹಣ, ಶಾಸಕರ ಅನುದಾನ ಸೇರಿದಂತೆ 40 ಕೋಟಿಯಷ್ಟು ಆದಾಯ ನಿರೀಕ್ಷೆಯಿದ್ದು, ಧೂಳುಮುಕ್ತ ನಗರ ನಿರ್ಮಾಣಕ್ಕೆ 7 ಕೋಟಿ, ನೀರು ಸರಬರಾಜಿಗೆ 4 ಕೋಟಿ, ಬೀದಿ ದೀಪಗಳ ಅಳವಡಿಕೆಗೆ 2 ಕೋಟಿ, ಘನ ತ್ಯಾಜ್ಯ ನಿರ್ವಹಣೆಗೆ 2 ಕೋಟಿ ರೂ. ನಿಗದಿ ಪಡಿಸಿದೆ.

ಚರಂಡಿ, ರಸ್ತೆ ಹಾಗೂ ಕಟ್ಟಡ ದುರಸ್ತಿ, ಅಂಗನವಾಡಿ ಕಟ್ಟಡ ನಿರ್ಮಾಣ, ಬಸ್ ತಂಗುದಾಣ ನಿರ್ಮಾಣ, ಉದ್ಯಾನವನ ಹಾಗೂ ವೃತ್ತಗಳ ಅಭಿವೃದ್ಧಿ,
ಸಿಸಿ ಕ್ಯಾಮರಾಗಳ ಅಳವಡಿಕೆ, ಜಾಹೀರಾತು ಫಲಕ ನಿರ್ಮಾಣ, ಶೌಚಾಲಯ ನಿರ್ಮಾಣ, ಬೀದಿ ವ್ಯಾಪಾರಸ್ಥರಿಗೆ ಸೌಲಭ್ಯ ಒದಗಿಸುವುದು, ಕಲೆ-ಸಂಸ್ಕ್ರತಿ, ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು, ಪೌರ ಕಾರ್ಮಿಕರ ಅಧ್ಯಯನ ಪ್ರವಾಸ ಈ ಎಲ್ಲ ಕಾರ್ಯಗಳಿಗೆ ಹಣ ಮೀಸಲಿರಿಸಲಾಗಿದೆ ಎಂದು ಅಧ್ಯಕ್ಷರು ವಿವರಿಸಿದರು. ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಬಜೆಟ್ಟನ್ನು ಅನುಮೋದಿಸಿದರು.

ಅಂತಿಮ ಯಾತ್ರೆಯ ವಾಹನ ಖರೀದಿಸುವುದು, ಮುನ್ಸಿಪಲ್ ಹೈಸ್ಕೂಲ್ ನೆಲಸಮಗೊಳಿಸಿ ಶಾಸಕರ ಅನುದಾನ ಪಡೆದು ಹೊಸ ಕಟ್ಟಡ ನಿರ್ಮಿಸಲು ಇನ್ನಷ್ಟು ಹಣ ಒದಗಿಸಬೇಕು ಎಂದು ಬಜೆಟ್ ಬೆಂಬಲಿಸಿ ಬಿಜೆಪಿಯ ಪ್ರಕಾಶ ಪೂಜಾರ, ನಿಂಗರಾಜ ಕೋಡಿಹಳ್ಳಿ,  ರೂಪಾ ಚಿನ್ನಿಕಟ್ಟಿ, ಗಂಗಮ್ಮ ಹಾವನೂರ, ಮಲ್ಲಪ್ಪ ಅಂಗಡಿ ಅವರು ಮಾತನಾಡಿದರು.  

error: Content is protected !!