ಹರಿಹರ, ಫೆ. 19 – ನಗರದ ಹೊರವಲಯದ ದಾವಣಗೆರೆ ಮಾರ್ಗದ ಜೋಡಿ ರಸ್ತೆ ಮಧ್ಯದ ಹುಲ್ಲುಗಾವಲಿಗೆ ಬೆಂಕಿ ಬಿದ್ದು 25ಕ್ಕೂ ಹೆಚ್ಚು ಸಾಲು ಮರಗಳು ಆಹುತಿಯಾಗಿರುವ ಘಟನೆ ಮೊನ್ನೆ ನಡೆದಿದೆ.
1ನೇ ರೈಲ್ವೆ ಗೇಟಿನಿಂದ 2ನೇ ಗೇಟ್‍ವರೆಗಿನ ಅಂದಾಜು 2 ಕಿ.ಮೀ. ಜೋಡಿ ರಸ್ತೆ ಮಧ್ಯದಲ್ಲಿ ಅಂದಾಜು 200 ಸಾಲು ಮರಗಳಿವೆ. ಏಳೆಂಟು ವರ್ಷಗಳ ಹಿಂದೆ ದೊಡ್ಡಬಾತಿ ತಪೋವನ ಸಂಸ್ಥೆಯವರು ಲಕ್ಷಾಂತರ ಅನುದಾನ ವೆಚ್ಚ ಮಾಡಿ ಟ್ರೀ ಗಾರ್ಡ್‍ಗಳನ್ನು ಅಳವಡಿಸಿ ಸಸಿ ನೆಟ್ಟಿದ್ದರು. ಆ ಸಸಿಗಳು ಬಾಡಿದ ನಂತರ ಬೇರೆ, ಬೇರೆ ಸಂಸ್ಥೆಯವರು ಮತ್ತೆ ಸಸಿ ನೆಟ್ಟಿದ್ದರು. ಹೀಗೆ ಆರೇಳು ವರ್ಷಗಳಿಂದ ಏಳೆಂಟು ಅಡಿಗಳ ಎತ್ತರಕ್ಕೆ ಈ ಭಾಗದಲ್ಲಿ ಸಾಲು ಮರಗಳು ಬೆಳೆದಿದ್ದವು. ಡಿಜಿಆರ್ ರೆಸಾರ್ಟ್ ಕಡೆಯಿಂದ ಅಂದಾಜು 300 ಮೀ.ವರೆಗಿನ ಹುಲ್ಲುಗಾವಲಿಗೆ ಬೆಂಕಿ ಬಿದ್ದಿದ್ದು ಆ ಭಾಗದಲ್ಲಿನ ಮರಗಳು ಆಹುತಿಯಾಗಿವೆ.
ಹರಿಹರ-ದಾವಣಗೆರೆ ಮಧ್ಯ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ ತಂಪನೆ ವಾತಾವರಣ ನೀಡುತ್ತಿದ್ದ ಮರಗಳು ಆಹುತಿಯಾಗಿರುವುದು ಪರಿಸರ ಪ್ರೇಮಿಗಳಿಗೆ ಹಾಗೂ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ಕಾರಣ ಏನು? : ಯಾವುದೋ ವಾಹನ ಸವಾರರು ಬೀಡಿ, ಸಿಗರೇಟು ಸೇದಿ ಬಿಸಾಕಿದ್ದ ರಿಂದ ಅಥವಾ ಯಾರಾದರು ಉದ್ದೇಶ ಪೂರ್ವಕ ವಾಗಿಯೂ ಬೆಂಕಿ ಹಚ್ಚಿರಬಹುದೆಂದು ಅಂದಾಜಿಸಲಾಗಿದೆ. ಈ ಜೋಡಿ ರಸ್ತೆಯ ಮಧ್ಯ ಭಾಗದಲ್ಲಿ ಇನ್ನೂ 150ಕ್ಕೂ ಹೆಚ್ಚು ಮರಗಳು ಅಂದಾಜು 1.5 ಕಿ.ಮೀ. ಉದ್ದದ ವ್ಯಾಪ್ತಿಯಲ್ಲಿವೆ. ಆ ಭಾಗದಲ್ಲೂ ದಟ್ಟವಾದ ಹುಲ್ಲಿನ ಪೊದೆ ಇವೆ. ಈ ಹುಲ್ಲುಗಾವಲು ಪ್ರಖರ ಬಿಸಿಲಿಗೆ ಒಣಗಿದ್ದು ಅಲ್ಲಿಯೂ ಬೆಂಕಿ ಬೀಳುವ ಅಪಾಯವಿದೆ. ಸಸಿಗಳನ್ನು ನೆಟ್ಟಿರುವ ಸೇವಾ ಸಂಸ್ಥೆಯವರಿಗೆ ಹೇಳಿ ಬೆಳೆದಿರುವ ಹುಲ್ಲುಗಾವಲು ಕೀಳಿಸುವ ಪ್ರಯತ್ನ ಮಾಡುತ್ತೇನೆಂದು ಸಾಮಾಜಿಕ ಅರಣ್ಯ ಇಲಾಖೆ ಆರ್‍ಎಫ್‍ಒ ಟಿ.ಆರ್.ಅಮೃತ ಪತ್ರಿಕೆಗೆ ತಿಳಿಸಿದರು.
ಇಲ್ಲಿನ ತಪೋವನ ಸಂಸ್ಥೆಯವರು ಅಳವಡಿಸಿರುವ ದುಬಾರಿ ಬೆಲೆಯ ಹಲವು ಟ್ರೀ ಗಾರ್ಡ್‍ಗಳನ್ನು ಕೆಲವರು ಹೊತ್ಯೊಯ್ದಿದ್ದಾರೆ. ಈ ಭಾಗದ ಸಾಲು ಮರಗಳ ರಕ್ಷಣೆಗೆ ಸಾರ್ವಜನಿಕರು ಹಾಗೂ ಸರ್ಕಾರಿ ಇಲಾಖಾಧಿಕಾರಿಗಳೂ ಕೂಡ ಆಧ್ಯತೆ ನೀಡಬೇಕೆಂದು ಪರಿಸರಕ್ಕಾಗಿ ನಾವು ಸಂಸ್ಥೆಯ ಜಿಲ್ಲಾ ಸಂಚಾಲಕ ಬಿ ಫಾರ್ ಬ್ಯಾಂಬೂ ಜಬಿವುಲ್ಲಾ ಅಭಿಪ್ರಾಯ ಪಟ್ಟಿದ್ದಾರೆ.