ರಾಣೇಬೆನ್ನೂರು, ಫೆ. 19- ಕ್ಯಾಲ್ಸಿಯಂ ಶೇಖರಣೆಗೊಂಡು ರಕ್ತ ಸಂಚಲನೆಗೆ ತಡೆ ಉಂಟಾಗಿ ಹೃದಯ ಬೇನೆಯಿಂದ ಬಳಲುತ್ತಿದ್ದ ರಾಣೇಬೆನ್ನೂರಿನ ಈರ್ವರು ರೋಗಿಗಳಿಗೆ ಕ್ಲಿಷ್ಟಕರವಾದ ಆರ್ಬಿಟಲ್ ಅಥೆರೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿ ಅವರನ್ನು ಗುಣಪಡಿಸಿದ್ದು ದಾವಣಗೆರೆ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆಯ ಡಾ. ಆರ್.ಎಸ್. ಧನಂಜಯ ಅವರ ತಂಡದ ಕಾರ್ಯ ಶ್ಲ್ಯಾಘನೀಯವಾದುದು ಎಂದು ಹಿರಿಯ ಹೃದಯ ತಜ್ಞ ಡಾ. ಮಲ್ಲೇಶ ಪಿ. ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಮಧ್ಯಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಯಶಸ್ವು ಕಂಡ ಈ ಶಸ್ತ್ರಚಿಕಿತ್ಸೆ ಡಾ.ಧನಂಜಯ ಅವರ ವಿಶೇಷ ಸಾಧನೆ ಎಂದು ಬಣ್ಣಿಸಿದರು.
ಆಂಜಿಯೋಪ್ಲಾಸ್ಟ್ ಮಾಡಲು ಅಪಧಮನಿಗಳಲ್ಲಿ ಶೇಖರಣೆಗೊಂಡ ಕ್ಯಾಲ್ಸಿಯಂ ಅನ್ನು ಸ್ವಚ್ಛಗೊಳಿಸುವ ತಂತ್ರಜ್ಞಾನದ ಸಾಧನ ವಜ್ರದ ತುದಿ ಹೊಂದಿದ್ದು ಇದು ಪ್ರತಿ ಸೆಕೆಂಡಿಗೆ 80 ಸಾವಿರದಿಂದ 1 ಲಕ್ಷ 20 ಸಾವಿರದಷ್ಟು ಸುತ್ತು ತಿರುಗುವ ಮೂಲಕ ಸ್ಟಂಟ್ ಹಾಕಲು ಇರುವ ಅಡೆತಡೆಗಳನ್ನು ದೂರವಾಗಿಸುತ್ತದೆ. ನಂತರ ಸ್ಟಂಟ್ ಅಳವಡಿಸಿ ರೋಗಿಗಳನ್ನು ಗುಣಪಡಿಸಲಾಗುತ್ತದೆ. ಇದು ಅತ್ಯಂತ ನವೀನವಾದ ತಂತ್ರಜ್ಞಾನದ ಶಸ್ತ್ರಚಿಕಿತ್ಸೆಯಾಗಿದೆ.
ವ್ಯಾಯಾಮ ರಹಿತ ಬದುಕು, ಅಪೌಷ್ಟಿಕ ಆಹಾರ ಸೇವನೆ, ಒತ್ತಡದ ಬದುಕು, ಜೊತೆಗೆ ಮದ್ಯಪಾನ, ತಂಬಾಕು ಸೇವನೆ ಮುಂತಾದ ಜೀವನ ಪದ್ದತಿ ಇಂದಿನ ಯುವಕರ ಬದುಕು ಅತಂತ್ರಗೊಂಡಿದೆ.
35-40 ವಯಸ್ಸಿನ ಯುವಕರು ಹೃದಯ ಬೇನೆಗೆ ತುತ್ತಾಗಿ ಜೀವಕಳೆದು ಕೊಳ್ಳುತ್ತಿದ್ದಾರೆ ಎಂದು ಡಾ. ಮಲ್ಲೇಶ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.