ಉದ್ಯೋಗ ಕಲ್ಪಿಸುವಂತೆ ತಮ್ಮ ಸಂಜ್ಞೆಯ ಭಾಷೆಯ ಮೂಲಕ ವಿಶೇಷ ಚೇತನರು ಮಾಡಿದ ಮನವಿಗೆ ಸ್ಪಂದಿಸಿದ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ಫೆ. 19- ಜಿಲ್ಲೆಯ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗಾಗಿ ಸಕ್ಷಮ ಯೋಜನೆಯಡಿ ನೀಡಲಾಗುತ್ತಿರುವ ನೀಟ್ ಹಾಗೂ ಜೆಇಇ ತರಬೇತಿಯನ್ನು ಜವಾಹರ್ ನವೋದಯ ಶಾಲೆಯ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕೆಂದು ಪೋಷಕರು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಇಂದು ಭೇಟಿ ಮಾಡಿದ ನವೋದಯ ಶಾಲೆಯ ವಿದ್ಯಾರ್ಥಿಗಳ ಪೋಷಕರು ತಮ್ಮ ಮನವಿ ಸಲ್ಲಿಸಿದರು.
ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಕ್ಷಮ ಕಾರ್ಯಕ್ರಮದಡಿ ವಿಶೇಷ ತರಬೇತಿ ನೀಡುತ್ತಿರುವುದರಿಂದ ಸಾಕಷ್ಟು ಅನುಕೂಲವಾಗುತ್ತಿದೆ. ಇದನ್ನು ಜಿಲ್ಲೆಯ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಗೂ ವಿಸ್ತರಿಸಿದರೆ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಪೋಷಕರು ಸಂಸದರಿಗೆ ಮನವರಿಕೆ ಮಾಡಿದರು.
ಈ ವಿಚಾರ ಕುರಿತು ಮಾತನಾಡಿದ ಸಂಸದರಾದ ಡಾ. ಪ್ರಭಾ, ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕಳೆದ ವಾರ ಭೇಟಿಯಾಗಿ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇದೇ ವೇಳೆ ಸಂಸದರು ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳು ಹಾಗೂ ಕುಂದುಕೊರತೆಗಳನ್ನು ಆಲಿಸಿದರು.ಜನರ ಬೇಡಿಕೆಗಳಿಗೆ ಸ್ಪಂದಿಸುವಂತೆ ಅಧಿಕಾರಿ ವರ್ಗದವರಿಗೆ ಸೂಚನೆ ನೀಡಿದರು.
ಗ್ರಾಮೀಣ ಭಾಗದಿಂದ ಬಂದಿದ್ದ ಜನರ ಅಹವಾಲುಗಳನ್ನು ಸ್ವೀಕರಿಸಿದ ಡಾ. ಪ್ರಭಾ, ಸಾಧ್ಯವಾದಷ್ಟು ಶೀಘ್ರದಲ್ಲೇ ಎಲ್ಲರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ವಿಶೇಷವಾಗಿ ವಿಶೇಷಚೇತನರು ಉದ್ಯೋಗ ಕಲ್ಪಿಸುವಂತೆ ತಮ್ಮ ಸಂಜ್ಞೆಯ ಭಾಷೆಯ ಮೂಲಕ ಮಾಡಿದ ಮನವಿಗೆ ಸ್ಪಂದಿಸಿದ ಸಂಸದರು ಕ್ರಮ ವಹಿಸುವುದಾಗಿ ತಿಳಿಸಿದರು.