ದಾವಣಗೆರೆ, ಫೆ.18- ಅಪ್ರಾಪ್ತ ಬಾಲಕ ಬೈಕ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲೀಕರಿಗೆ ಇಲ್ಲಿನ 3ನೇ ಎಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 25 ಸಾವಿರ ರೂ.ಗಳ ದಂಡ ವಿಧಿಸಿದೆ.
ದಾವಣಗೆರೆ ದಕ್ಷಿಣ ಸಂಚಾರ ಠಾಣೆ ಪಿಎಸ್ಐ ನಿರ್ಮಲ ಡಿ.ಹೆಚ್ ಅವರು ಇದೇ ದಿನಾಂಕ 13ರಂದು ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಶಿರಸ್ತ್ರಾಣ ಇಲ್ಲದ ಬೈಕ್ ಸವಾರನ್ನು ನಿಲ್ಲಿಸಿ ತಪಾಸಣೆ ಮಾಡಿದ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕನೆಂದು ತಿಳಿದು ಬಂದಿರುತ್ತದೆ.
ಸರಸ್ವತಿ ನಗರದ ಪ್ರದೀಪ್ ಎಂಬುವವರಿಗೆ ಸೇರಿದ್ದ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕನ್ನು ವಶ ಪಡಿಸಿಕೊಂಡಿದ್ದು, ಈ ಬಗ್ಗೆ ದಕ್ಷಿಣ ಸಂಚಾರ ಠಾಣೆಯಲ್ಲಿ ಬೈಕ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಲಿ, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
ಈ ಕುರಿತು ನ್ಯಾಯಾಧೀಶರು ದಂಡ ವಿಧಿಸಿ ಆದೇಶಿಸಿದ್ದಾರೆ.
ಈ ಮೂಲಕ ನ್ಯಾಯಾಲಯವು ಅಪ್ರಾಪ್ತರಿಗೆ ವಾಹನ ನೀಡದಂತೆ ಪೋಷಕರಿಗೆ ಎಚ್ಚರಿಕೆ ನೀಡಿದೆ.