ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಆರೋಪ
ದಾವಣಗೆರೆ, ಫೆ. 14 – ಕಳೆದ ಆರು ವರ್ಷಗಳ ಹಿಂದೆ ದೇಶದ ಸೈನಿಕರನ್ನು ಗುರಿಯಾಗಿಟ್ಟು ಕೊಂಡು ನಡೆದ ಪುಲ್ವಾಮಾ ದಾಳಿ ಬಿಜೆಪಿಯ ರಾಜಕೀಯ ಷಡ್ಯಂತ್ರದ ಭಾಗಗಳ ಲ್ಲೊಂದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ನಿಂದ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಇಂದು ಹಮ್ಮಿಕೊಂಡಿದ್ದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
2019ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ಬಿಜೆಪಿ ಇಂತಹ ಕೃತ್ಯಕ್ಕೆ ಕೈಹಾಕಿತ್ತು ಎಂದು ಅಂದು ರಾಜ್ಯಪಾಲರಾಗಿದ್ದ ಬಿಜೆಪಿಯವರೇ ಆರೋಪ ಮಾಡಿದ್ದರು. ದಾಳಿ ಬಗ್ಗೆ ಇಂದಿಗೂ ಸಹ ಸಮರ್ಪಕವಾದ ತನಿಖೆ ಹೊರಬಾರದಿರುವುದನ್ನು ನೋಡಿದರೆ ಈ ಆರೋಪ ಸತ್ಯವೆನಿಸಲಿದೆ ಎಂದು ಅನುಮಾನಿಸಿದರು. ಬಿಜೆಪಿಯ ರಾಜಕೀಯ ಷಡ್ಯಂತ್ರಕ್ಕೆ 40 ವೀರ ಸೈನಿಕರು ಸಾವನ್ನಪ್ಪಿದರು. ಇದೀಗ ಈ ದಾಳಿ ನಡೆದು ಆರು ವರ್ಷಗಳಾಗಿದ್ದು, ದುರಂತದ ಪ್ರಮಾಣವು ಇಡೀ ರಾಷ್ಟ್ರವನ್ನು ಆಘಾತಗೊಳಿಸಿತು, ಇದರೊಂದಿಗೆ ವ್ಯಾಪಕ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾದರೂ ಸಹ ಕೇಂದ್ರ ಸರ್ಕಾರ ಅದನ್ನು ಚುನಾವಣೆಗೆ ಬಳಸಿಕೊಂಡಿತೇ ವಿನಃ ತನಿಖೆಗೆ ಮುಂದಾಗಲಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಎ. ನಾಗರಾಜ್, ಜಿ.ಎಸ್. ಮಂಜುನಾಥ್, ಎಲ್.ಹೆಚ್. ಸಾಗರ್, ಮಹಿಳಾ ಕಾಂಗ್ರೆಸ್ನ ಮಂಗಳಮ್ಮ. ದ್ರಾಕ್ಷಾಯಣಮ್ಮ, ರಾಜೇಶ್ವರಿ, ರಾಜು ಭಂಡಾರಿ, ಶ್ರೀಕಾಂತ್, ಯುವರಾಜ್, ಶ್ರೀನಿವಾಸ್, ಚೇತನ್, ಪ್ರವೀಣ್, ಸತೀಶ್, ಶಿವರಾಜ್, ಆಸೀಫ್ ಮತ್ತಿತರರಿದ್ದರು.