ದಾವಣಗೆರೆ, ಫೆ. 13 – ಧಾರ್ಮಿಕ ಆಚರಣೆಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಧರ್ಮ, ಆಚಾರ, ವಿಚಾರ ಮತ್ತು ಸಂಸ್ಕಾರಗಳೊಂದಿಗೆ ಸತತವಾಗಿ 25 ವರ್ಷಗಳ ಕಾಲ ಧಾರ್ಮಿಕ ಕಾರ್ಯಕ್ರಮ ಆಚರಿಸಿಕೊಂಡು ಬರುವ ಮೂಲಕ ಇಂದಿನ ಪೀಳಿಗೆಗೆ ಅರಿವು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಹುಬ್ಬಳ್ಳಿ ಚೌಡಪ್ಪ ಗಲ್ಲಿಯ ಲ್ಲಿರುವ ಶ್ರೀ ವೀರಭದ್ದೇಶ್ವರ ದೇವಸ್ಥಾನ ದಲ್ಲಿ ಬುಧವಾರ ಭರತ ಹುಣ್ಣಿಮೆಯಂದು ಶ್ರೀ ವೀರಭದ್ರೇಶ್ವರ ಶಿಲಾಮೂರ್ತಿ 25ನೇ ವಾರ್ಷಿಕ ಮಹೋತ್ಸವ, ಬಲಮುರಿ ಶ್ರೀ ಗಣೇಶ ಶಿಲಾಮೂರ್ತಿ 7ನೇ ವಾರ್ಷಿಕ ಮಹೋತ್ಸವ ಹಾಗೂ ಉಪಾಸಕರಾದ ಲಿಂ. ಗುರುಬಾಯಮ್ಮನವರ 10ನೇ ವರ್ಷದ ಪುಣ್ಯಸ್ಮರಣೋತ್ಸವದ ಧಾರ್ಮಿಕ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಗುಗ್ಗಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಗುರುಬಾಯಮ್ಮನವರು ಕಳೆದ 25 ವರ್ಷಗಳ ಹಿಂದೆ ತಮ್ಮ ಮನೆಯಲ್ಲಿ ಒಡಮೂಡಿದ ಶ್ರೀ ವೀರಭದ್ರೇಶ್ವರ ಸ್ವಾಮಿ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿ ಅಂದಿನಿಂದ 10 ವರ್ಷಗಳ ಕಾಲ ಪ್ರತಿ ಭರತ ಹುಣ್ಣಿಮೆಯಂದೇ ಗದ್ದುಗೆ ಪ್ರತಿಷ್ಠಾಪಿಸಿ, ಗುಗ್ಗಳ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಅವರ ಕಾಲಾ ನಂತರ ಪುತ್ರ ಕರಿಬಸಪ್ಪ ಮತ್ತು ಜಯಮ್ಮ ದಂಪತಿ, ತಾಯಿ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನವರೆಗೂ ಧಾರ್ಮಿಕ ಪದ್ಧತಿ ಮುಂದುವರೆಸಿಕೊಂಡು ಬಂದಿದ್ದಾರೆ ಎಂದರು.
ಭರತ ಹುಣ್ಣಿಮೆಯಂದೇ ಗುಗ್ಗಳ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರು ವುದಕ್ಕೆ ಒಂದು ಹಿನ್ನೆಲೆ ಇದೆ. ಗಣಾಚಾರಿ ಗಳ ಅಧಿನಾಯಕ ಶ್ರೀ ವೀರಭದ್ರೇಶ್ವರ ಸ್ವಾಮಿ ಆಗಿದ್ದು, ಧರ್ಮಕ್ಕೆ ಕುತ್ತು ಬಂದಾಗ ಅದನ್ನು ಸಹಿಸದೇ ನಿಂದನೆ ಮಾಡುವವರಿಗೆ ಶಿಕ್ಷೆ ನೀಡುವವನೇ ಶ್ರೀ ವೀರಭದ್ರಶ್ವೇರ ಸ್ವಾಮಿ ಆಗಿದ್ದಾನೆ. ಈತನ ಆರಾಧನೆ ಮೂಲಕ ದೇವಾನು ದೇವತೆಗಳ ರಥೋತ್ಸವಗಳು ನಡೆಯು ತ್ತವೆ ಎಂದು ಮಾಹಿತಿ ನೀಡಿದರು.
ದೂಡಾ ಸದಸ್ಯೆ ವಾಣಿ ಎಂ.ಜಿ.ಬಕ್ಕೇಶ್ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಜನರ ಭಾವನೆಗಳಲ್ಲಿ ಭಯ, ಭಕ್ತಿ ಮೂಡುತ್ತವೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಅಭಿ ಕಾಟನ್ ಮಾಲೀಕ ಎಂ.ಜಿ.ಬಕ್ಕೇಶ್, ಕೊಟ್ರೇಶ್, ವೀರಪ್ಪ ಬಿಜ್ಜೂರು, ಮಹಾಂತೇಶ್ ಕಾರಟಗಿ, ಶ್ರೀಮತಿ ಲಕ್ಷ್ಮಿ ರವಿ ಬಿಜ್ಜೂರು ಗುರುಲಿಂಗಯ್ಯ ಹಿರೇಮಠ್, ಮುರುಗೇಶ್, ಶಿವನಗೌಡ, ಸವಿತಾ ಸಂತೋಷ್ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು. ದಾವಣಗೆರೆ ಟೈಮ್ಸ್ ಸಂಪಾದಕ ಜೆ.ಎಸ್.ವೀರೇಶ್ ಕಾರ್ಯಕ್ರಮ ನಿರೂಪಿಸಿದರು.