ಹರಪನಹಳ್ಳಿ ತಾ. ದೊಡ್ಡಮೈಲಾರ ಲಿಂಗೇಶ್ವರ ಕಾರಣಿಕೋತ್ಸವ

ಹರಪನಹಳ್ಳಿ ತಾ. ದೊಡ್ಡಮೈಲಾರ ಲಿಂಗೇಶ್ವರ ಕಾರಣಿಕೋತ್ಸವ

ಹರಪನಹಳ್ಳಿ, ಫೆ.12- `ಮುತ್ತಿನ ರಾಶಿಗೆ ಮಂಜು ಮುಸುಕೀತಲೇ ಪರಾಕ್’ ಇದು ಪಟ್ಟಣದ ಹೊರವಲಯದಲ್ಲಿ ಬುಧವಾರ ನಡೆದ ಇತಿಹಾಸ ಪ್ರಸಿದ್ದ ದೊಡ್ಡಮೈಲಾರ ಲಿಂಗೇಶ್ವರ ಕಾರಣಿಕೋತ್ಸವ ದಲ್ಲಿ ಗೊರವಯ್ಯ ಕೋಟೆಪ್ಪ ನುಡಿದ ದೈವವಾಣಿ.

ಭರತ ಹುಣ್ಣಿಮೆ ಅಂಗವಾಗಿ ದೊಡ್ಡ ಮೈಲಾರ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂರಾರು ಗೊರವಪ್ಪಗಳ ಢಮರುಗದ ನಿನಾದ, ನೆರೆದಿದ್ದ ಸಾವಿರಾರು ಭಕ್ತರ `ಏಳು ಕೋಟಿ.. ಏಳು ಕೋಟಿ.. ಚಹಾಂಗ ಬಲೋ..’ ಭಕ್ತಿಯ ಘೋಷಮಯವಾಗಿತ್ತು.

ಬೆಳಿಗ್ಗೆಯಿಂದ ಮರಡಿ ಕಟ್ಟೆಯಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಆಚರಿಸಿದ ಬೆಲ್ಲದ ಬಂಡಿ ಉತ್ಸವದಲ್ಲಿ ಭಕ್ತರು ಎತ್ತಿನ ಬಂಡಿಗಳನ್ನು ಓಡಿಸಿ ಭಕ್ತಿ ಸಮರ್ಪಿಸಿದರು.

9 ದಿನ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ಕೋಟೆಪ್ಪ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ಬಿಲ್ಲನ್ನೇರಿ ಸದ್ದಲೇ ಎನ್ನುತ್ತಿದ್ದಂತೆ ನೆರೆದವರೆಲ್ಲ ನಿಶ್ಯಬ್ದವಾದರು. ಕಾರಣಿಕ ನುಡಿದು ಕೆಳಗೆ ಬೀಳುತ್ತಿದ್ದಂತೆ ಅವರನ್ನು ಗೊರವ ಸಮೂಹ ಎತ್ತಿ ಹಿಡಿದು ಸಂಭ್ರಮಿಸಿದರು.

ಭರತ ಹುಣ್ಣಿಮೆ ಮೈಲಾರ ಲಿಂಗೇಶ್ವರನ ಭಕ್ತರಿಗೆ ಮಹತ್ವದ್ದು. ದುಷ್ಟ ಸಂಹಾರ ಶಿಷ್ಟರ ರಕ್ಷಣೆಗಾಗಿ ಮಾರ್ತಾಂಡ ಬೈರವನ ರೂಪದಲ್ಲಿ ಧರೆಗೆ ಬಂದ ಭಗವಂತ, ಮಣಿ ಮಲ್ಲಾಸುರರ ಸಂಹಾರ ಮಾಡಿ, ಮರಳಿ ಕೈಲಾಸಕ್ಕೆ ಹೋಗುತ್ತಿರಲು ಪುರಜನರು ಇಲ್ಲೇ ನೆಲೆಸುವಂತೆ ಮೊರೆ ಇಡುತ್ತಾರೆ. 

ಭಕ್ತರ ಭಕ್ತಿಗೆ ಮಣಿದ ಭಗವಂತ ಮಣಿಚೂಲ ಪರ್ವತ ದಲ್ಲಿ ಲಿಂಗರೂಪದಲ್ಲಿ ನೆಲೆಸಿ, ನನ್ನನ್ನು ಸ್ಮರಣೆ ಮಾಡುವ ಭಕ್ತರ ಹಿಂದೆ ನಾನು ಸದಾ ಇದ್ದು ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತೇನೆ, ಗಂಗೆ ಪಾರ್ವತಿಯರು ಗಂಗೆ ಮಾಳವ್ವರಾಗಿ ನೆಲೆಸುತ್ತಾರೆ.

ಧರ್ಮಕರ್ತರಾದ ದತ್ತಾತ್ರೇಯ ರಾವ್, ಮಾರ್ತಾಂಡ ರಾವ್, ಡಾ. ನಾಗೇಶ್ವರ ರಾವ್, ಕೋಟೇಶ್ವರ ರಾವ್, ಗಣಚಾರಿ ದುರುಗಪ್ಪ, ಪುರಸಭೆ ಸದಸ್ಯರಾದ ಕಿರಣ್ ಶ್ಯಾನಭೋಗ, ಗಣೇಶ, ಭರತೇಶ ಇತರರು ಇದ್ದರು.

error: Content is protected !!