ದಾವಣಗೆರೆ, ಫೆ. 10 – ಹನ್ನೆರಡನೇ ಶತಮಾನ ಶಿವಶರಣರ ಶತಮಾನ ವಾಗಿದ್ದು, ಕಾಯಕದ ಜತೆಗೆ ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ವಚನಗಳ ಮೂಲಕ ಸಮಾಜ ಸುಧಾರಿಸುವ ಕೆಲಸ ಮಾಡಿದರು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಂದು ಆಯೋ ಜಿಸಲಾಗಿದ್ದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ತಾರತಮ್ಯ, ಅಸಮಾನತೆ, ಲಿಂಗ ತಾರತಮ್ಯ, ಜಾತಿಭೇದ ಎಂಬ ಅನೇಕ ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಡಿದವರು ಶರಣರು, ಈ ಮೂಲಕ ಕಾಯಕ ಶರಣರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕಲ್ಯಾಣದ ಕ್ರಾಂತಿಯಲ್ಲಿ ಇಡೀ ಶರಣರ ಹೋರಾಟವಿದೆ. ಬಸವ ಕಲ್ಯಾಣ ಎಂಬುವುದು ಒಬ್ಬರಿಂದ ಮಾತ್ರವಲ್ಲದೇ ಸಮಾಜದ ಕಟ್ಟ ಕಡೆಯಿಂದ ಬಂದ ಈ ಐದು ಜನ ಕಾಯಕ ಶರಣರ ಪಾತ್ರ ಪ್ರಮುಖವಾಗುತ್ತದೆ. ಇವರ ಬಗ್ಗೆ ಬಸವಣ್ಣನವರು ಅನೇಕ ಹೇಳಿಕೆಗಳನ್ನು ನೀಡಿದ್ದಾರೆ. ಒಬ್ಬ ಅಜ್ಞಾನವಂತನೂ ಸಹ ಪರಿವರ್ತನೆಯಿಂದ ಮಹಾಜ್ಞಾನಿಯಾಗುತ್ತಾನೆ ಎಂದರು.
ಸತ್ಯ, ಶುದ್ದ ಕಾಯಕದ ಮೂಲಕ ಜೀವನ ನಡೆಸುವ ಕುರಿತಂತೆ ಅಂದಿನ ಅನೇಕ ವಚನಕಾರರು ತಮ್ಮ ಮೊನಚಾದ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದರು. ಅವರ ವಚನಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ. ಅವರು ನೀಡಿರುವ ಸಂದೇಶಗಳನ್ನು ಎಲ್ಲರೂ ಪಾಲಿಸಿದಲ್ಲಿ, ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಹಿರಿಯ ಸಾಹಿತಿ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ ಹಾಗೂ ಉರಿಲಿಂಗ ಪೆದ್ದಿ ಇವರ ವಚನಗಳ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಮಕ್ಕಳಿಗೆ ಓದಿಸುವುದರ ಜತೆಗೆ ಅವುಗಳನ್ನು ವಿಮರ್ಶೆಗೊಳಪಡಿಸಬೇಕು.
ಆ ನಿಟ್ಟಿನಲ್ಲಿ ಶಿಕ್ಷಕರು ಮುನ್ನಡೆದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಲಾವಿದರಾದ ಹೆಗ್ಗೆರೆ ರಂಗಪ್ಪ ಮತ್ತು ಕಲಾ ತಂಡದವರಿಂದ ವಚನ ಗಾಯನ ನಡೆಸಲಾಯಿತು. ದೂಡಾ ಅಧ್ಯಕ್ಷ ದಿನೇಶ್.ಕೆ.ಶೆಟ್ಟಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನವೀನ್ ಮಠದ್, ಡಿಡಿಪಿಐ ಕೊಟ್ರೇಶ್, ಮುಖಂಡರಾದ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.