ಹರಿಹರ : ಪದಗ್ರಹಣ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ
ಹರಿಹರ, ಫೆ. 10 – ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರುವಂತಹ ಶಕ್ತಿ, ಸಾಮರ್ಥ್ಯ, ಬದ್ಧತೆ, ಮತ್ತು ಹೊಣೆಗಾರಿಕೆ ಸರ್ಕಾರಿ ನೌಕರರಿಗೆ ಇರುವುದರಿಂದ, ಜನರು ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅಭಿಪ್ರಾಯಪಟ್ಟರು.
ನಗರದ ಗುರು ಭವನದಲ್ಲಿ ನಡೆದ ಸರ್ಕಾರಿ ನೌಕರರ 2024-29 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು,
ರಾಜ್ಯದಲ್ಲಿ ಈ ಹಿಂದೆ 3.5 ಕೋಟಿ ಜನಸಂಖ್ಯೆ ಇದ್ದ ಸಮಯದಲ್ಲಿ ರಾಜ್ಯದಲ್ಲಿ 7.5 ಲಕ್ಷ ಸರ್ಕಾರಿ ನೌಕರರು ಕೆಲಸ ಮಾಡುತ್ತಿದ್ದರು, ಆದರೆ ಈಗ ರಾಜ್ಯದ ಜನ ಸಂಖ್ಯೆ 6.5 ಕೋಟಿಗೆ ಏರಿದ್ದರೂ 5 ಲಕ್ಷದ 12 ಸಾವಿರ ಸರ್ಕಾರಿ ನೌಕರರು ಇದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ನೌಕರರು ನಿವೃತ್ತರಾಗಿದ್ದು, ರಾಜ್ಯ ಸರ್ಕಾರವು ಖಾಲಿ ಇರುವಂತಹ 2.5 ಲಕ್ಷ ನೌಕರರ ಹುದ್ದೆಯನ್ನು ಭರ್ತಿ ಮಾಡಿದರೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಸಹಕಾರಿಯಾಗುತ್ತದೆ ಎಂದರು.
ಸರ್ಕಾರ ಹೊಸ ಹೋಸ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಅನುಷ್ಠಾನಕ್ಕೆ ತರುವ ಸಮಯದಲ್ಲಿ, ಕೆಲವು ಸರ್ಕಾರಿ ನೌಕರರ ಸಣ್ಣ ಪುಟ್ಟ ದೋಷಗಳನ್ನು ಹುಡುಕಿ, ಅವರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಾ, ಕೆಲಸದಿಂದ ವಜಾಗೊಳಿಸಬೇಕು ಎಂದು ಅರ್ಜಿಯನ್ನು ನೀಡುವಂತಹ ಪರಿಪಾಠ ದಿಂದಾಗಿ ನೌಕರರು ಸಾಕಷ್ಟು ತೊಂದರೆಗೆ ಸಿಲುಕಿದ್ದರು. ಆದರೆ ನಮ್ಮ ಸಂಘಟನೆಯು ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ, ಅಂತಹ ಅರ್ಜಿಗಳನ್ನು ರದ್ದು ಮಾಡಿಸಿದೆ ಎಂದರು.
ಸಂಘದ ಜಿಲ್ಲಾ ಅಧ್ಯಕ್ಷ ಎನ್. ವೀರೇಶ್ ಒಡೇನಪುರ ಮಾತನಾಡಿ, ಎಲ್ಲಾ ಇಲಾಖೆಗಳಲ್ಲಿ ಬರುವಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದಾಗ ನಾವು ಪದಾಧಿಕಾರಿಗಳಾಗಿ ಆಯ್ಕೆ ಆಗಿದ್ದು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತಹಶೀಲ್ದಾರ್ ಗುರುಬಸವರಾಜ್ ಮಾತ ನಾಡಿ, ನೌಕರರು ಸಾರ್ವಜನಿಕರ ಕೆಲಸವನ್ನು ಜವಾಬ್ದಾರಿಯಿಂದ ಮತ್ತು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದರೆ ಮಾತ್ರ ಸರ್ಕಾರಿ ನೌಕರರಿಗೆ ಸಮಾಜದಲ್ಲಿ ಹೆಚ್ಚು ಗೌರವ ಸಿಗುತ್ತದೆ ಎಂದರು.
ಪ್ರಭಾರಿ ಬಿಇಓ ಹೆಚ್ ಕೃಷ್ಣಪ್ಪ , ತಾಪಂ ಇಓ ಸುಮಲತಾ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯ ಮಹಾಂತೇಶ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪರಿಷತ್ ಸದಸ್ಯ ಎಂ. ಉಮ್ಮಣ್ಣ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್, ಪ್ರಭಾರಿ ಬಿಇಓ ಹೆಚ್. ಕೃಷ್ಣಪ್ಪ, ಅಬಕಾರಿ ಇಲಾಖೆಯ ಎಇಇ ಕೆ.ಶಿವರಾಜ್, ಆರೋಗ್ಯ ಇಲಾಖೆ ಡಾ.ಅಬ್ದುಲ್ ಖಾದರ್, ಅರಣ್ಯಾಧಿಕಾರಿ ಟಿ.ಆರ್. ಅಮೃತ, ಎಪಿಎಂಸಿ ಮರುಳಸಿದ್ದಯ್ಯ, ಜಿಲ್ಲಾ ನೌಕರರ ಸಂಘದ ಖಜಾಂಚಿ ಬಿ. ಆರ್. ತಿಪ್ಪೇಸ್ವಾಮಿ, ಟಿ. ಓಬಳಪ್ಪ ದಾವಣಗೆರೆ, ಮಾಜಿ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಎಂ.ವಿ. ಹೊರಿಕೇರಿ, ಶರಣ್ ಕುಮಾರ್ ಹೆಗಡೆ, ಎಂ. ಎಂ. ರಾಜಮ್ಮ, ಡಿ.ಎಂ. ಮಂಜುನಾಥಯ್ಯ, ಕುಬೇಂದ್ರ ಮೆಕ್ಕಪ್ಪನವರ್, ಈಶಪ್ಪ ಬೂದಿಹಾಳ, ಹೆಚ್. ಚಂದ್ರಪ್ಪ, ಪಿ. ಪ್ರಕಾಶ್, ಚಂದ್ರಪ್ಪ ದೊಗ್ಗಳ್ಳಿ, ಮುಸ್ತಾಕ್ ಆಹ್ಮದ್ ಇತರರು ಹಾಜರಿದ್ದರು.
ಪ್ರಾರ್ಥನೆ ಶಿವಮೂರ್ತಿ, ನಾಡಗೀತೆ ತಿಪ್ಪೇರುದ್ರಸ್ವಾಮಿ ಪ್ರೌಢ ಶಾಲಾ ಮಕ್ಕಳಿಂದ, ಸ್ವಾಗತ ವೀರಪ್ಪ, ನಿರೂಪಣೆ ಗದಿಗೆಪ್ಪ ಹಳೆಮನೆ, ವಂದನಾರ್ಪಣೆಯನ್ನು ಶೈಲಾ ಮೈದೂರು ಮಾಡಿದರು.