ದಾವಣಗೆರೆ, ಫೆ.10- ಇಲ್ಲಿಗೆ ಸಮೀಪದ ಆವರಗೊಳ್ಳ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 17ರಂದು ಜರುಗಲಿದೆ ಎಂದು ವೀರಭದ್ರೇಶ್ವರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಬಿ.ಎಂ. ಷಣ್ಮುಖಯ್ಯ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಾಡಿದ್ದು ದಿನಾಂಕ 12ರಿಂದ ಇದೇ ದಿನಾಂಕ 20ರ ವರೆಗೆ ವಿವಿಧ ವಾಹನಗಳ ಉತ್ಸವಾದಿಗಳು 9 ದಿನಗಳ ಕಾಲ ನಡೆಯಲಿದೆ ಎಂದು ಹೇಳಿದರು.
ಫೆ.12ರ ಬುಧವಾರದಂದು ನಂದಿ `ಧ್ವಜಾರೋಹಣ’ ಹಾಗೂ ಕಳಸ ಕನ್ನಡಿ ಮತ್ತು ಸಕಲ ಬಿರುದಾವಳಿಗಳೊಂದಿಗೆ ಸ್ವಾಮಿಯನ್ನು ಮೆರವಣಿಗೆಯೊಂದಿಗೆ ಕರೆತರಲಾಗುವುದು.
13ರ ಗುರುವಾರ ರಾತ್ರಿ 9ಕ್ಕೆ `ಬಸವೇಶ್ವರ ಆರೋಹಣ ಉತ್ಸವ’, 14ರ ಶುಕ್ರವಾರ ರಾತ್ರಿ 9 ಗಂಟೆಗೆ ಸರ್ಪಾರೋಹಣ ಉತ್ಸವ, 15ರ ಶನಿವಾರ ರಾತ್ರಿ 8 ಗಂಟೆಗೆ ರಥಕ್ಕೆ ಕಳಸಾರೋಹಣ ಹಾಗೂ 9 ಗಂಟೆಗೆ ಅಶ್ವಾರೋಹಣ ಉತ್ಸವ ನಡೆೆಯಲಿವೆ.
16ರ ಭಾನುವಾರ ರಾತ್ರಿ ದೊಡ್ಡಬಾತಿ ರೇವಣಸಿದ್ದೇಶ್ವರ ಸ್ವಾಮಿ ಮತ್ತು ಬೀರಲಿಂಗೇಶ್ವರ ಸ್ವಾಮಿಯ ಆಗಮನ, ವೀರಭದ್ರ ಸ್ವಾಮಿಗೆ ಆವರಗೊಳ್ಳ ಪುರವರ್ಗ ಹಿರೇಮಠಸ್ಥರಿಂದ ಹರಿದ್ರಾಲೇಪನ ಹಾಗೂ ತೇರುಮನೆ ಚೌಡೇಶ್ವರಿಗೆ ದೇವಸ್ಥಾನ ವತಿಯಿಂದ ಉಡಿ ತುಂಬಲಾಗುವುದು.
17ರ ಸೋಮವಾರ ಸಂಜೆ 6 ಗಂಟೆಗೆ ಸ್ವಾಮಿಯ ಮಹಾ ರಥೋತ್ಸವ ನಡೆದ ಬಳಿಕ ರಾತ್ರಿ ಉಯ್ಯಾಲೆ ಮಂಟಪದಲ್ಲಿ ಸ್ವಾಮಿ ಆಸೀನರಾಗಲಿದ್ದು ನಂತರ ವೀರಗಾಸೆ ಸೇವೆ ನಡೆಯಲಿದೆ. 18ರಂದು ಮಂಗಳವಾರ ಬೆಳಗ್ಗೆ 8ಕ್ಕೆ ಸ್ವಾಮಿಯ ಗುಗ್ಗಳ ಸೇವೆ, ರಾತ್ರಿ 10 ಗಂಟೆಗೆ ಭಕ್ತರಿಂದ ಓಕಳಿ ಸೇವೆ ಮತ್ತು ಗಂಗಾ ಪೂಜೆ ನಡೆಯಲಿದೆ.
19ರಂದು ಬೆಳಗ್ಗೆ 8 ಗಂಟೆಗೆ ಸಕಲ ಬಿರುದಾವಳಿಗಳೊಂದಿಗೆ ಉಯ್ಯಾಲೆ ಮಂಟಪದಿಂದ ಸ್ವಾಮಿಯ ಗುಗ್ಗಳದೊಂದಿಗೆ ರೇವಣಸಿದ್ದೇಶ್ವರ ಹಾಗೂ ಬೀರಲಿಂಗೇಶ್ವರ ಸ್ವಾಮಿಗಳೊಂದಿಗೆ ದೇವಸ್ಥಾನಕ್ಕೆ ಬಂದು ಸೇರುವುದು. ಕೊನೆಯ ದಿನವಾದ 20ನೇ ತಾರೀಖಿನಂದು ಗುರುವಾರ ಕಂಕಣ ವಿಸರ್ಜನೆ ನಡೆಯಲಿದೆ. ಈ ವೇಳೆ ದೇವಸ್ಥಾನ ಸಮಿತಿಯ ವಿ. ವೀರಯ್ಯ, ಖಜಾಂಚಿ ಡಿ. ವೀರಯ್ಯ, ನಿರ್ದೇಶಕ ಹೆಚ್. ರಾಜಶೇಖರ್, ವೀರಭದ್ರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಇದ್ದರು.