ಮನಃ ಪರಿವರ್ತನೆಯಿಂದ ಸಮಾಜದಲ್ಲಿ ಸಾಮರಸ್ಯ, ಸುಭದ್ರತೆ ಸಾಧ್ಯ

ಮನಃ ಪರಿವರ್ತನೆಯಿಂದ ಸಮಾಜದಲ್ಲಿ ಸಾಮರಸ್ಯ, ಸುಭದ್ರತೆ ಸಾಧ್ಯ

ಕೊಕ್ಕನೂರು : ಪಾನಮುಕ್ತ ಸದಸ್ಯರ ನವ ಜೀವನೋತ್ಸವ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಪ್ರಕಾಶ್ ಅಭಿಮತ 

ಮಲೇಬೆನ್ನೂರು, ಫೆ.10- ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆಯಿಂದ ರಾಜ್ಯದಲ್ಲಿ ನಡೆಸುತ್ತಿರುವ ಮದ್ಯವ್ಯಸನ ಮುಕ್ತ ಕಾರ್ಯಕ್ರಮ ತುಂಬಾ ಶ್ರೇಷ್ಠತೆಯಿಂದ ಕೂಡಿದ್ದು, ಸಮಾಜ ಪರಿವರ್ತನೆಯಿಂದ ಕುಟುಂಬ, ಸಮಾಜ, ದೇಶ ಸ್ವಾಸ್ಥ್ಯತೆ ಪಡೆಯುತ್ತವೆ ಎಂದು ಜಿಲ್ಲಾ ಮೀಸಲು ಪೊಲೀಸ್ ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ್ ಅಭಿಪ್ರಾಯಪಟ್ಟರು.

ಕೊಕ್ಕನೂರು ಶ್ರೀ ಪವನದೇವ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪಾನಮುಕ್ತ ಸದಸ್ಯರ ನವ ಜೀವನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಯೋಜನೆಯಡಿ ಹತ್ತು ಹಲವು ಜನಪರ ಕಾರ್ಯಕ್ರಮಗಳಿದ್ದು, ಅದರಲ್ಲಿ ಮದ್ಯವ್ಯಸನಿಗಳನ್ನು ಗುರುತಿಸಿ, ಅವರ ಮನಃಪರಿವರ್ತಿಸಿ, ಅವರ ಕುಟುಂಬಗಳಿಗೆ ಭದ್ರತೆ, ಭರವಸೆ ನೀಡುವ ಈ ಕಾರ್ಯಕ್ರಮ ತುಂಬಾ ಮಹತ್ವದ ಕಾರ್ಯವಾಗಿದೆ.
ಜನ ಸಾಮಾನ್ಯರ ಮನ ಪರಿವರ್ತನೆಯಿಂದ
ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ. ಇದು ಪೊಲೀಸ್ ಇಲಾಖೆಗೂ, ದೇಶದ ಸುಭದ್ರತೆಗೆ ಸಹಕಾರಿ ಎಂದು ಪ್ರಕಾಶ್ ಹೇಳಿದರು.

ಮದ್ಯವರ್ಜನೆ ಶಿಬಿರದಲ್ಲಾದ ಮನಃಪರಿವರ್ತನೆಯಿಂದ ಮದ್ಯಪಾನ ತ್ಯಜಿಸಿದ ಜಿಗಳಿಯ ಮಹೇಶ್ ಮಾತನಾಡಿ, ನಾವು ಮದ್ಯಸೇವನೆ ತ್ಯಜಿಸಿದ ಮೇಲೆ ಸಮಾಜದಲ್ಲಿ ಗೌರವ ಹೆಚ್ಚಾಗಿದೆ. ಕುಟುಂಬದಲ್ಲಿ ಎಲ್ಲರೂ ಸುಖವಾಗಿದ್ದೇವೆ.

ಕೈಯಲ್ಲಿ ಬ್ರಾಂಡಿ ಬಾಟಲಿ ಇತ್ತು, ಈಗ ಕೈಯಲ್ಲಿ ಮೈಕ್ ಇದೆ ಎಂದು ಸಂತಸ ವ್ಯಕ್ತಪಡಿಸಿದರು. ಎಂ.ಎನ್.ಹಳ್ಳಿ ಚಂದ್ರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ್ ಮಾತನಾಡಿದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಮಾತನಾಡಿ, ಯಾವುದೇ ಮದ್ದಿಲ್ಲದೆ, ಇಂಜೆಕ್ಷನ್ ಇಲ್ಲದೇ ಕೇವಲ ಪ್ರೀತಿ, ವಿಶ್ವಾಸ, ಆತ್ಮಬಲದಿಂದ ಮದ್ಯವನ್ನು ತ್ಯಜಿಸುವಂತೆ ಮಾಡಲಾಗುತ್ತದೆ. ರಾಜ್ಯದಲ್ಲಿ ಇದುವರೆಗೆ 1905 ಮದ್ಯವರ್ಜನ ಶಿಬಿರಗಳನ್ನು ನಡೆಸಿದ್ದು, 1.20 ಲಕ್ಷ ಜನ ಪಾನಮುಕ್ತರಾಗಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇವೆ ಎಂದರು. 

ಅಧ್ಯಾತ್ಮ ಚಿಂತಕ ಹೊಳೆಸಿರಿಗೆರೆಯ ಡಿ.ಸಿದ್ದೇಶ್ ಮಾತನಾಡಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಮತ್ತು ಸ್ವಾಮಿಯ ಮೇಲಿನ ಭಕ್ತಿಯಿಂದ ಜನರು ಬದಲಾವಣೆಯತ್ತಾ ಹೆಜ್ಜೆ ಇಟ್ಟಿದ್ದಾರೆ. ಇದು ಮುಂದೆ ದೊಡ್ಡದಾಗಲಿದೆ ಎಂಬ ವಿಶ್ವಾಸ ಇದೆ ಎಂದರು. 

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಜಿ.ಮಂಜುನಾಥ್ ಪಟೇಲ್, ವೆಂಕಟರಾಮಾಂಜನೇಯ ಮಾತನಾಡಿದರು. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಅಭಿನಂದನ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಜಿಗಳಿ ಪ್ರಕಾಶ್, ಹನುಮಂತರಾಯ, ಪ್ರಗತಿಪರ ಕೃಷಿಕ ನಿರಂಜನ ಪಾಟೀಲ್, ಜಿಗಳಿ ವಲಯ ಮೇಲ್ವಿಚಾರಕ ಹರೀಶ್ ಮತ್ತು ಪಾನಮುಕ್ತ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು. ಎಂ.ಎನ್.ಹಳ್ಳಿ ವಲಯ ಮೇಲ್ವಿಚಾರಕಿ ರಕ್ಷಿತಾ ಸ್ವಾಗತಿಸಿದರು. ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರೆ,  ಕೊಕ್ಕನೂರು ವಲಯ ಮೇಲ್ವಿಚಾರಕರಾದ ರಂಜಿತ ವಂದಿಸಿದರು.

error: Content is protected !!