ಮಲೇಬೆನ್ನೂರು, ಫೆ.9- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ ಅಂಗವಾಗಿ ಭಾನುವಾರ ಬೆಳಿಗ್ಗೆ ಶ್ರೀ ಮಹರ್ಷಿ ವಾಲ್ಮೀಕಿ ಮಹಾರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಶ್ರೀ ಡಾ.ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ನಾಡಿ ನ ವಿವಿಧ ಮಠಾಧೀಶರು ಪುಷ್ಪಾ ರ್ಚನೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಮಾಜಿ ಸಚಿವ ಆನಂದ್ ಸಿಂಗ್ ಅವರು ಸುಮಾರು 1.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಈ ರಥದಲ್ಲಿ ರಾಮಾಯಣದ ಪಾತ್ರ ಗಳನ್ನು ಕೆತ್ತನೆ ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯುವಂತಿದೆ. `ಜೈ ವಾಲ್ಮೀಕಿ, ಜೈ ಜೈ ವಾಲ್ಮೀಕಿ’ ಎಂಬ ಜಯಘೋಷಗಳೊಂದಿಗೆ ಭಕ್ತರು ರಥೋತ್ಸವದಲ್ಲಿ ಹೆಜ್ಜೆ ಹಾಕಿ ಪುನೀತರಾದರು. ಡೊಳ್ಳು, ಕೀಲುಕುಣಿತ, ಗೊಂಬೆ ಕುಣಿತ, ವೀರಗಾಸೆ, ಹಲಗೆ, ಭಜನೆ ಸೇರಿದಂತೆ ನಾಡಿನ ಹೆಸರಾಂತ ಕಲಾಮೇಳಗಳು ರಥೋತ್ಸವಕ್ಕೆ ಮೆರಗು ತಂದವು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ರಥೋತ್ಸವಕ್ಕೂ ಮುನ್ನ ರಥಕ್ಕೆ ಬೃಹತ್ ಹೂವಿನ ಹಾರವನ್ನು ಕ್ರೇನ್ ಮೂಲಕ ಹಾಕಿದರು.
ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಕೆ.ಶಿವನಗೌಡ ನಾಯಕ, ಶಾಸಕರಾದ ದೇವೇಂದ್ರಪ್ಪ, ಬಿ.ಪಿ.ಹರೀಶ್, ಜಾತ್ರಾ ಸಮಿತಿ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ, ಗುರುಪೀಠದ ಧರ್ಮದರ್ಶಿಗಳಾದ ಶಾಂತಲಾ ರಾಜಣ್ಣ, ಹೊಸಪೇಟೆ ಜಂಬಯ್ಯ ನಾಯಕ, ಬಿ.ವೀರಣ್ಣ, ಡಾ. ಜಿ.ರಂಗಯ್ಯ, ಹರ್ತಿಕೋಟೆ ವೀರೇಂದ್ರ ಸಿಂಹ, ನಲುವಾಗಲು ನಾಗರಾಜಪ್ಪ, ಕೆ.ಬಿ.ಮಂಜುನಾಥ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. ಸಿಪಿಐ ಸುರೇಶ್ ಸಗರಿ, ಪಿಎಸ್ಐ ಮಂಜುನಾಥ್ ಕುಪೇಲೂರು ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.