ದಾವಣಗೆರೆ, ಫೆ.7- ಶೋಷಣೆಗೊಳಗಾದ ಹೆಣ್ಣು ಮಕ್ಕಳ ಪರ ಧ್ವನಿಯಾಗಿದ್ದ ಸಾಮಾಜಿಕ ಸೇವಾ ಕಾರ್ಯಕರ್ತರಾದ ಶ್ರೀಮತಿ ಉಮಾ ವೀರಭದ್ರಪ್ಪ ಅವರು ನಿನ್ನೆ ರಾತ್ರಿ 11.30ಕ್ಕೆ ನಿಧನರಾದರು.
ವಯೋಸಹಜತೆಯಿಂದ ಬಳ ಲುತ್ತಿದ್ದ ಉಮಾ ವೀರಭದ್ರಪ್ಪ ಅವರು ಬೆಂಗಳೂರಿನಲ್ಲಿರುವ ತಮ್ಮ ಪುತ್ರ – ವೈದ್ಯ
ಡಾ. ಭರತ್ ಭೂಷಣ್ ಅವರ ನಿವಾಸದಲ್ಲಿ ಕಳೆದ 2 – 3 ತಿಂಗಳಿಂದ ವೈದ್ಯರ ಆರೈಕೆಯಲ್ಲಿದ್ದರು.
ಮೃತರಿಗೆ ಸುಮಾರು 84 ವರ್ಷ ವಯಸ್ಸಾಗಿ ತ್ತು. ಓರ್ವ ಪುತ್ರ, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು -ಬಳಗವನ್ನು ಅಗಲಿ ರುವ ಮೃತರ ಅಂತ್ಯಕ್ರಿಯೆಯು ಬೆಂಗ ಳೂರಿನಲ್ಲಿ ಇಂದು ಬೆಳಿಗ್ಗೆ ನೆರವೇರಿತು.
ಸಂಕ್ಷಿಪ್ತ ಪರಿಚಯ : ಮೂಲತಃ ಮೈಸೂರಿನವರಾದ ಉಮಾ, ಜಗಳೂರಿನ ಜೆ.ಎನ್. ವೀರಭದ್ರಪ್ಪ ಅವರನ್ನು ಮದುವೆಯಾಗಿ, ನಂತರದ ದಿನಗಳಲ್ಲಿ ದಾವಣಗೆರೆಯಲ್ಲಿ ವಾಸವಾಗಿದ್ದರು.
1980 – 1990ರ ದಶಕಗಳಲ್ಲಿ ಮಹಿಳೆ ಯರ ಮೇಲಿನ ಶೋಷಣೆ, ವರದಕ್ಷಿಣಿ ಕಿರುಕುಳ, ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದ ಸಂದರ್ಭದಲ್ಲಿ ಮಹಿಳಾ ಸಂಘಟನೆಗಳನ್ನು ಹುಟ್ಟು ಹಾಕಿದ್ದ ಉಮಾ, ಆ ಸಂಘಟನೆಗಳ ಮೂಲಕ ಬೀದಿಗಿಳಿದು ಹೋರಾಟ ಮಾಡುವುದರೊಂದಿಗೆ ಶೋಷಣೆಗೊಳಗಾದ ಮಹಿಳೆಯರಿಗೆ ನ್ಯಾಯ ಒದಗಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು.
ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ದಿ. ಶ್ರೀಮತಿ ವಿಮಲಾ ದಾಸ್ ಮತ್ತು ಇತರರೊಂದಿಗೆ ಸೇರಿ ಜಾಗೃತ ಮಹಿಳಾ ಸಂಘವನ್ನು ಸ್ಥಾಪಿಸಿದ್ದ ಉಮಾ ವೀರಭದ್ರಪ್ಪ, ಈ ಸಂಘದ ಮುಖವಾಣಿಯಲ್ಲಿ ಮಹಿಳೆಯರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದರು. ವಿಮಲಾ ದಾಸ್ ಕಾಲವಾದ ನಂತರ ಆ ಸಂಘದ ಅಧ್ಯಕ್ಷರಾಗಿದ್ದ ಉಮಾ, ಇಂದಿಗೂ ಜಾಗೃತ ಮಹಿಳಾ ಸಂಘದಡಿಯಲ್ಲಿ ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಲೇ ಬಂದಿದ್ದರು. ಮಹಿಳೆಯೆರಿಗೆ ಸ್ವ-ಉದ್ಯೋಗ ಮಾಡಲು ಅನುಕೂಲವಾಗುವಂತೆ ಸಹಾಯ – ಸಹಕಾರ ಮಾಡುತ್ತಿದ್ದರು.
ತಮ್ಮದೇ ಆದ ದುರ್ಗಾದೇವಿ ಮಹಿಳಾ ಮಂಡಳಿಯನ್ನು ಸ್ದಾಪಿಸಿ ಆ ಸಂಘದ ಮೂಲಕ, ಅಮೆರಿಕದಲ್ಲಿರುವ ತಮ್ಮ ಸಹೋದರ ಡಾ. ನಾಗರಾಜ ಮೂರ್ತಿ ಮತ್ತು ಸಿ.ಜಿ. ಆಸ್ಪತ್ರೆ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಉಚಿತ ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ನಡೆಸುತ್ತಿದ್ದರು. ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಈ ಶಿಬಿರಗಳ ಸದುಪಯೋಗ ಪೆಡೆದುಕೊಂಡಿದ್ದು, ಇದು ಅವರ ಸಮಾಜ ಸೇವೆಗೆ ಹಿಡಿದ ಕೈಗನ್ನಡಿ.
ತಮ್ಮ ಪತಿ ಜೆ.ಎನ್. ವೀರಭದ್ರಪ್ಪ ಅವರ ಜೊತೆ ದಾವಣಗೆರೆ ಜಿಲ್ಲೆ ಮಾತ್ರವಲ್ಲದೇ, ನೆರೆ ಜಿಲ್ಲೆಗಳಲ್ಲೂ ಸಂಚರಿಸಿ ನೂರಾರು ಉಚಿತ ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಿದ್ದರು. ಅನೇಕರಿಂದ ನೇತ್ರಗಳನ್ನು ಪಡೆದು, ಅಂಧರಿಗೆ ಬೆಳಕು ನೀಡುವ ಕೆಲಸವನ್ನೂ ಅವರ ಮಾಡುತ್ತಿದ್ದರು. ಪತಿ ವೀರಭದ್ರಪ್ಪ ಕಾಲವಾದ ಮತ್ತು ತಮ್ಮ ವಯೋಸಹಜತೆಯಿಂದಾಗಿ ಶಿಬಿರ ನಡೆಸುವುದನ್ನು ಕೈಬಿಟ್ಟಿದ್ದರು.
ಜಾಗೃತ ಮಹಿಳಾ ಸಂಘದ ಜೊತೆ – ಜೊತೆಗೆ ಅಕ್ಕಮಹಾದೇವಿ ಮಹಿಳಾ ಸಮಾಜ, ಮಹಿಳಾ ಸಮಾಜ, ವನಿತಾ ಸಮಾಜ, ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕ, ಗಾಣಿಗರ ಮಹಿಳಾ ಸಮಾಜಗಳಲ್ಲದೇ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ, ಅನೇಕ ಸಾಮಾಜಿಕ ಸಂಘ – ಸಂಸ್ಥೆಗಳಲ್ಲಿ ಸಕ್ರಿಯ ಪದಾಧಿಕಾರಿಗಳಾಗಿದ್ದರು.
ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ನಿರ್ದೇಶಕರಾಗಿಯೂ ಉಮಾ ಸೇವೆ ಸಲ್ಲಿಸುತ್ತಿದ್ದರು. ಕಾಂಗ್ರೆಸ್ ಪಕ್ಷದ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿಯಾಗುವುದರ ಮೂಲಕ ರಾಜಕೀಯ ಪಕ್ಷದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು.
ಉಮಾ ವೀರಭದ್ರಪ್ಪ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಮಹಿಳಾ ಸಾಧಕರಿಗೆ ಪ್ರತಿ ವರ್ಷ ಕೊಡಮಾಡುವ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಲಯನ್ಸ್, ರೋಟರಿ ಸೇರಿದಂತೆ, ಹಲವಾರು ಸಾಮಾಜಿಕ ಸಂಸ್ಥೆಗಳು ಉಮಾ ಅವರಿಗೆ ಪುರಸ್ಕಾರ ನೀಡಿ ಸನ್ಮಾನಿಸಿದ್ದವು.
ಶೋಕ : ಉಮಾ ವೀರಭದ್ರಪ್ಪ ಅವರ ನಿಧನಕ್ಕೆ ಮಹಿಳಾ ಸಮಾಜದ ಉಪಾಧ್ಯಕ್ಷರಾದ ಶ್ರೀಮತಿ ನೀಲಗುಂದ ಜಯಮ್ಮ, ಜಾಗೃತ ಮಹಿಳಾ ಸಂಘದ ಕಾರ್ಯದರ್ಶಿ ಶ್ರೀಮತಿ ಅಮೀನಾ ಬಾನು, ವನಿತಾ ಸಮಾಜದ ಶ್ರೀಮತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್ ಸೇರಿದಂತೆ, ಅನೇಕರು ಕಂಬನಿ ತೀವ್ರ ಮಿಡಿದಿದ್ದಾರೆ.