ಶ್ರೀ ಅನ್ನದಾನೇಶ್ವರ ಮಠದಲ್ಲಿ 276ನೇ ಶಿವಾನುಭವ ಸಂಪದ ಕಾರ್ಯಕ್ರಮ ಓಂಕಾರ ಶ್ರೀ
ದಾವಣಗೆರೆ, ಜ. 4 – ವಯಸ್ಸಿನ ಮಕ್ಕಳು ಶಾಪವೂ ಹೌದು, ವರವೂ ಹೌದು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಅವರು ಇತ್ತೀಚಿಗೆ ಶ್ರೀ ಹಾಲಕೆರೆ ಅನ್ನದಾನೇಶ್ವರ ಶಾಖಾಮಠದಲ್ಲಿ ಏರ್ಪಡಿಸಿದ್ದ 276ನೇ ಶಿವಾನುಭವ ಸಂಪದದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಎಡವುತ್ತಿದ್ದಾರೆ.
ಸಮಾಜದಲ್ಲಿ ಪ್ರತಿಕ್ಷಣ ತಂದೆ, ತಾಯಿಗಳು ಪಟ್ಟ ಕಷ್ಟಕ್ಕೆ ಬೆಲೆ ತರುವ ಮಕ್ಕಳು ವರವಾಗಿ ಕಾಣಿಸುತ್ತಾರೆ, ಹಾಗೆಯೇ ಅವರು ಪಟ್ಟ ಕಷ್ಟವನ್ನು ಪರಿಗಣಿಸದೇ ಇಂದಿನ ಸಮಾಜದ ಆಕರ್ಷಣೆಗೆ ಬಿದ್ದು ಪೋಷಕರನ್ನು ನಿರ್ಲಕ್ಷ ಮಾಡಿ ಅವರ ಬುದ್ಧಿ ಮಾತನ್ನು ಪರಿಗಣಿಸದೇ ಉದಾಸೀನ ಮಾಡುವಂತಹ ಮಕ್ಕಳು ಮನೆಗೆ ಮತ್ತು ಸಮಾಜಕ್ಕೆ ಶಾಪವಾಗಿ ಕಾಣುತ್ತಾರೆ.
ಯುವ ಪೀಳಿಗೆಗೆ ಸಮಯೋಚಿತವಾಗಿ ಸಂಸ್ಕಾರವನ್ನು ಕೊಟ್ಟು ಒಂದು ಒಳ್ಳೆಯ ಪ್ರಜೆಯನ್ನಾಗಿ ನೀಡುವಲ್ಲಿ ಪೋಷಕರ ಮಹತ್ವ ತುಂಬಾ ಇದೆ. ಇದನ್ನು ಎಲ್ಲರೂ ಅನುಸರಿಸಿ ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ಬೆಳೆಸಲು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀಗಳಿಂದ ಗುರು ರಕ್ಷೆ ಪಡೆದ ಮಹಾನಗರ ಪಾಲಿಕೆಯ ಮಹಾಪೌರರಾದ ಚಮನ್ ಸಾಬ್ ಮಾತನಾಡಿ ಶಿವಾನುಭವ ಎಂದರೆ ಒಳ್ಳೆಯದನ್ನು ಯೋಚನೆ ಮಾಡಿ, ಒಳ್ಳೆಯದನ್ನು ಮಾಡುವುದು ತ್ಯಾಗ, ಕರುಣೆ ಮತ್ತು ಕ್ಷಮೆಯಲ್ಲಿ ಶಿವಾನುಬೋಧ ಅನುಭವವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವ ದಾರಿ ತಪ್ಪುತ್ತಿದೆ. ಮಕ್ಕಳು ಏನು ದುಡಿದು ಬಂದ ಎನ್ನುವುದನ್ನು ಬಿಟ್ಟು ಎಷ್ಟು ದುಡಿದು ಬಂದ ಎಂದು ಕೇಳುತ್ತಿದ್ದೇವೆ. ಇದರಿಂದ ಮಕ್ಕಳಲ್ಲಿ ಪ್ರಾಮಾಣಿಕ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂದರು.
ಈ ಸಂದರ್ಭದಲ್ಲಿ ಲಿಂ|| ಶ್ರೀಮತಿ ರುದ್ರಮ್ಮ ಲಿಂ|| ಎನ್ ಎ ಗುಂಡಪ್ಪ ಇವರುಗಳ ಸ್ಮರಣಾರ್ಥ ಎಂ.ಜಿ. ಅಮರೇಶ ಮತ್ತು ಮಕ್ಕಳು ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದರು
ಶ್ರೀ ಗುರು ಪಂಚಾಕ್ಷರಿ ಸಂಗೀತ ವಿದ್ಯಾಲಯದ ಟಿ ಹೆಚ್ ಎಂ ಶಿವಕುಮಾರ ಸ್ವಾಮಿ ಪ್ರಾರ್ಥಿಸಿದರು. ನಂತರ ನಿವೃತ್ತ ಮುಖ್ಯೋಪಾಧ್ಯಾಯ ಮಹಾರುದ್ರಪ್ಪ ಮೆಣಸಿನಕಾಯಿ ಸ್ವಾಗತಿಸಿದರು. ಸಹಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ ಅಡಿವೆಪ್ಪ ವಹಿಸಿದ್ದರು, ನಾಗರಾಜ್ ಯರಗಲ್, ಕೆ.ಟಿ ಮಹಾಲಿಂಗೇಶ್, ಕಲ್ಲೇಶ್, ಎನ್ ಎ ಗುರುರಾಜ್, ವಿವೇಕ್ ಎಲ್ ಬದ್ದಿ, ಮುತ್ತುರಾಜ್ ವಿ ಬಾವಿ, ಪತ್ರಕರ್ತ ಅನಿಲ್ ಕುಮಾರ್ ವಿ. ಬಾವಿ ಮತ್ತಿತರರು ಉಪಸ್ಥಿತರಿದ್ದರು.