ಸಾಲಗಾರರಿಗೆ ಕಿರುಕುಳ ನೀಡಿದರೆ ಗಡಿಪಾರು

ಸಾಲಗಾರರಿಗೆ ಕಿರುಕುಳ ನೀಡಿದರೆ ಗಡಿಪಾರು

ರಾಣೇಬೆನ್ನೂರು, ಫೆ.3 –   ಸಾಲಗಾರರಿಗೆ ಅಥವಾ ಅವರ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರು ವುದು, ಅಸಹ್ಯಪಡಿಸುವುದು ಅಥವಾ ಹಿಂಸಿಸು ವುದು, ಇಂತಹ ಯಾವುದೇ ರೀತಿಯ ಘಟನೆಗಳು ಮೈಕ್ರೋ ಫೈನಾನ್ಸ್ ನವರಿಂದ ಎರಡನೇ ಬಾರಿ ನಡೆದರೆ ಅವರನ್ನು ಗಡಿಪಾರು ಮಾಡಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಎಚ್ಚರಿಕೆ ನೀಡಿದರು.

ನಗರಸಭೆ ಸಭಾಭವನದಲ್ಲಿ ಇಂದು ಕರೆಯಲಾಗಿದ್ದ ಮೈಕ್ರೋ ಫೈನಾನ್ಸ್  ಕಂಪನಿ ಮುಖ್ಯಸ್ಥರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಶೇಕಡಾ 10 ರಿಂದ 20 ರಷ್ಟು ಲಾಭ ಗಳಿಸುವ ಸಣ್ಣ ಪುಟ್ಟ ವ್ಯಾಪಾರಿಗಳಿಂದ ಶೇಕಡಾ 36 ರಷ್ಟು ಬಡ್ಡಿಯನ್ನು  ನೀವು ವಸೂಲಿ ಮಾಡುತ್ತಿದ್ದೀರಿ. ಒಂದು ಕಂಪನಿಯವರು ಮೂರು ಜನರಿಗೆ ಕೊಡದೇ ಹತ್ತರಿಂದ ಹನ್ನೆರಡು ಜನರಿಗೆ ಕೊಟ್ಟು ಅವರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಅನೇಕರು ನನ್ನ ಗಮನಕ್ಕೆ ತಂದಿದ್ದಾರೆ. ಇನ್ನು ಮುಂದೆ ನನ್ನ ತಾಲ್ಲೂಕಿನಲ್ಲಿ  ಇಂತಹ ಯಾವುದೇ ಘಟನೆಗಳಿಗೆ ಅವಕಾಶವಿಲ್ಲ ಎಂದು ಶಾಸಕರು  ಕಟುವಾಗಿ ತಿಳಿಸಿದರು.

ಫೈನಾನ್ಸ್‌ನವರ  ವರ್ತನೆಯಿಂದ  ಜನರು ದೂರು ಕೊಡಲು ಹೆದರುತ್ತಿರುವ ಬಗ್ಗೆ ನನಗೆ ತಿಳಿದಿದೆ. ಕಾರಣ ಪೊಲೀಸರು ದೂರು ಬರುವುದನ್ನು ಕಾಯದೇ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಸಭೆಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ ಶಾಸಕರು, ನಮ್ಮ ಪಿಕೆಕೆ ಸಂಸ್ಥೆಯಿಂದ ಸಹಾಯವಾಣಿ ತೆರೆದಿದ್ದು ಅವರು ಕೊಡುವ ದೂರುಗಳನ್ನು ಸ್ವೀಕರಿಸುವಂತೆ ಹೇಳಿ ಸಹಾಯ ವಾಣಿಯ ಮೊಬೈಲ್  7483646820 ಎಂದು ಸಂಖ್ಯೆ ತಿಳಿಸಿದರು.

ರಾಷ್ಟ್ರೀಕೃತ ಅಥವಾ ಇನ್ನಿತರೆ ಹಣಕಾಸು ಸಂಸ್ಥೆಗಳಿಗೆ ಅಲೆದಾಡಿ ಸಹಾಯ ಸಿಗದ ಬಹಳಷ್ಟು ಬಡವರು  ಸ್ವಾವಲಂಬಿಗಳಾಗಿ ಬದುಕಲು ಮೈಕ್ರೋ ಫೈನಾನ್ಸ್ ಕಂಪನಿಗಳವರು ಸಹಾಯ ಮಾಡಿದ್ದಾರೆ.  ಆ ಬಗ್ಗೆ ಅವರ ಕಾರ್ಯ ಮೆಚ್ಚುವಂತಹದು. ಆದರೆ ಬಡವರನ್ನು ಅನೇಕ ರೀತಿಯಲ್ಲಿ ಶೋಷಣೆ ಮಾಡುವುದು ತಪ್ಪು. ಇದು ಮುಂದುವರೆದರೆ ಕಠಿಣ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಪ್ರಕಾಶ ಕೋಳಿವಾಡ ಮತ್ತೊಮ್ಮೆ ಎಚ್ಚರಿಸಿದರು.

ಸಭೆಯಲ್ಲಿ ನಗರಾಧ್ಯಕ್ಷೆ ಚಂಪಕ ಬಿಸಲಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ತಹಶೀಲ್ದಾರ್‌ ಆರ್.ಎಚ್. ಬಾಗವಾನ, ಪೌರಾಯುಕ್ತ ಪಕ್ಕೀರಪ್ಪ, ಪೋಲೀಸ್ ಅಧಿಕಾರಿಗಳು, ಮೈಕ್ರೊ ಫೈನಾನ್ಸ್‌ ಕಂಪನಿಗಳ ಅಧಿಕಾರಿಗಳು ಮತ್ತಿತರು ಭಾಗವಹಿಸಿದ್ದರು.

error: Content is protected !!