ಬಾಲಕಿ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ

ಬಾಲಕಿ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ

ದಾವಣಗೆರೆ, ಜ. 31- ಬಾಲಕಿ ಮೇಲೆ ಅತ್ಯಾಚಾರ ಹಾಗೂ ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಚನ್ನಗಿರಿ ಪಟ್ಟಣದ ದೇವರಾಜ್ ಅರಸು ಬಡಾವಣೆಯ ‘ಸಿ’ ಬ್ಲಾಕ್‌ನ ನಿವಾಸಿ ಅಮ್ಜದ್  ತಂದೆ ಎಸ್ .ಎಂ ಶಫೀ (56) ಬಂಧಿತ ಆರೋಪಿಯಾಗಿದ್ದು, ಈತನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಚನ್ನಗಿರಿ ಪಟ್ಟಣದಲ್ಲಿ ಮೆಡಿಕಲ್‌ ಶಾಪ್‌ ಇಟ್ಟುಕೊಂಡಿದ್ದ ಅಮ್ಜದ್, ಅಂಗಡಿಗೆ ಬರುವ ಹೆಣ್ಣು ಮಕ್ಕಳನ್ನು ಫುಸಲಾಯಿಸಿ ಬಲೆಗೆ ಬೀಳಿಸಿಕೊಂಡು, ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ, ವಿಡಿಯೋ ಚಿತ್ರೀಕರಿಸಿಕೊಂಡಿದ್ದ ವಿಷಯ ಬಹಿರಂಗವಾಗಿದೆ. 

ಬಸ್‌ನಿಲ್ದಾಣ, ಮಾರುಕಟ್ಟೆ, ಬಸ್  ಹೀಗೆ ಎಲ್ಲಿಯೇ  ಹೆಣ್ಣು ಮಕ್ಕಳು ಕಂಡರೂ ಅವರ ವಿಡಿಯೋ ಗುಪ್ತವಾಗಿ ಚಿತ್ರಿಸಿಕೊಳ್ಳುವ ಹವ್ಯಾಸ ಇಟ್ಟುಕೊಂಡಿದ್ದ ಈತ, ಮೆಡಿಕಲ್‌ ಶಾಪ್‌ಗೆ ಬರುವ ಹೆಣ್ಣು ಮಕ್ಕಳ ಮುಖವನ್ನು ತನ್ನ‌ ಮೊಬೈಲ್‌ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ.ಹೆಣ್ಣುಮಕ್ಕಳು ಸ್ನಾನ ಮಾಡುತ್ತಿರುವುದು, ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವುದು ಮಾತ್ರವಲ್ಲದೇ ರಸ್ತೆಗಳಲ್ಲಿ ಓಡಾಡುತ್ತಿರುವ ವೀಡಿಯೋಗಳೂ ವಾಟ್ಸಾಪ್‌ನಲ್ಲಿ ಹರಿದಾಡಿವೆ.

ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಡಿಯೊಗಳ ಖಚಿತತೆಯ ಬಗ್ಗೆ ಪರಿಶೀಲನೆಯೂ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಹೆಸರು, ವಯಸ್ಸು, ಧರ್ಮ, ವಿಳಾಸ ಗುರುತಿಸುವ ಅಂಶಗಳನ್ನು ಒಳಗೊಂಡಂತೆ ಸಂತ್ರಸ್ತರ ಅಥವಾ ನೊಂದವರ ಗುರುತಿನ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಸಂದೇಶ ಮತ್ತು ಸಂಭಾಷಣೆಗಳನ್ನು ಹಂಚಿಕೊಳ್ಳುವುದು ಶಿಕ್ಷಾರ್ಹವಾಗಿವೆ. ಯಾವುದೇ ಕಾರಣಕ್ಕೂ ಇಂತಹ ವಿಡಿಯೋಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ.

error: Content is protected !!