ಮಕ್ಕಳ ಕಲಿಕೆ ಬಗ್ಗೆ ಪೋಷಕರು ನಿಗಾ ವಹಿಸಿದರೆ ಮಾತ್ರ ಉತ್ತಮ ಫಲಿತಾಂಶ ಸಾಧ್ಯ

ಮಕ್ಕಳ ಕಲಿಕೆ ಬಗ್ಗೆ ಪೋಷಕರು ನಿಗಾ ವಹಿಸಿದರೆ ಮಾತ್ರ ಉತ್ತಮ ಫಲಿತಾಂಶ ಸಾಧ್ಯ

ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರ ಸಭೆಯಲ್ಲಿ ಶಾರದೇಶಾನಂದ ಸ್ವಾಮೀಜಿ ಅಭಿಮತ

ಮಲೇಬೆನ್ನೂರು, ಜ. 30- ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 50 ದಿನ ಬಾಕಿ ಇದ್ದು, ತಮ್ಮ ಮಕ್ಕಳ ಕಲಿಕೆ ಬಗ್ಗೆ ಪೋಷಕರಾದ ತಾವು ನಿತ್ಯ ನಿಗಾ ವಹಿಸಿ, ಅವರನ್ನು ಪ್ರೋತ್ಸಾಹಿಸಿ ಎಂದು ಹರಿಹರದ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ್ ಹೇಳಿದರು.

ಅವರು ಗುರುವಾರ ಪಟ್ಟಣದ ಸುನ್ನಿ ಶಾದಿ ಮಹಲ್‌ನಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಪೋಷಕರು ಮಕ್ಕಳಿಗೆ ಅರ್ಥೈಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸಿ, ಹಬ್ಬ ಆಚರಣೆಯ ಸಂಭ್ರಮದ ವಾತಾವರಣವನ್ನು ಮಕ್ಕಳಿಗಾಗಿ ಪೋಷಕರು ಮತ್ತು ಶಿಕ್ಷಕರು ಸೇರಿ ಸೃಷ್ಠಿಸಬೇಕೆಂದು ಸ್ವಾಮೀಜಿ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಅಧ್ಯಕ್ಷರ ಹಾಗೂ ನ್ಯಾಯಾಧೀಶರೂ ಆದ ತಾಜ್ ಉದ್ದೀನ್ ಮಾತನಾಡಿ, ಮಕ್ಕಳ ಹಕ್ಕುಗಳ ಕುರಿತು ಪೋಷಕರಿಗೆ ಹಾಗೂ ಶಿಕ್ಷಕರಿಗೆ ತಿಳಿಸಿದರು.

ಪ್ರಭಾರ ಬಿಇಓ ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳನ್ನು ಶಾಲೆಗೆ ಸೇರಿಸಿದ ಮಾತ್ರಕ್ಕೆ ಪೋಷಕರ ಪಾತ್ರ ಮುಗಿಯುವುದಿಲ್ಲ. ಮಕ್ಕಳ  ಬಗ್ಗೆ ಪ್ರತಿದಿನವೂ ಕಾಳಜಿ ವಹಿಸಬೇಕು. ಅವರು ಸರಿಯಾಗಿ ಶಾಲೆಗೆ ಹೋಗುತ್ತಾರೋ ಇಲ್ಲವೋ ಮತ್ತು ಕಲಿಕೆ ಬಗ್ಗೆ ಶಾಲೆಗೆ ಹೋಗಿ ಶಿಕ್ಷಕರಿಂದ ಮಾಹಿತಿ ಪಡೆದುಕೊಳ್ಳಬೇಕೆಂದು ಪೋಷಕರಿಗೆ ಹೇಳಿದರು.

ಸ.ಪ.ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಸರ್ಕಾರಿ ಉರ್ದು ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸೈಯದ್ ಸಾಬೀರ್ ಅಲಿ, ಪುರಸಭೆ ಸದಸ್ಯ ಎ. ಆರೀಫ್ ಅಲಿ, ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಾದ ಜಗದೀಶ್ ಉಜ್ಜಮ್ಮನವರ್, ಎಂ. ಮಲ್ಲಿಕಾರ್ಜುನ್, ಸಿ. ಜಯಣ್ಣ, ಮಹ್ಮದ್ ಇಲಿಯಾಸ್, ಮಂಜಪ್ಪ, ನಂದಿತಾವರೆ ಉಮೇಶ್, ಶಿಕ್ಷಕರಾದ ರೇವಣಸಿದ್ದಪ್ಪ ಅಂಗಡಿ, ಸುರೇಶ್ ಮೂಲಿಮನಿ, ರಾಮಪ್ಪ ಸೋಮಣ್ಣೇರ, ಆರೀಫ್ ಉಲ್ಲಾ, ಸೈಯದ್ ಕೌಸರ್, ಮಮತಾ, ಲತಾ ಮತ್ತಿತರರು ಭಾಗವಹಿಸಿದ್ದರು.

ಮಲೇಬೆನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ 11 ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ಮಕ್ಕಳು ಪೋಷಕರು ಸಭೆಯಲ್ಲಿದ್ದರು.

error: Content is protected !!