ಮಲೇಬೆನ್ನೂರು, ಜ.29- ಹರಿಹರ-ಶಿವಮೊಗ್ಗ ರಸ್ತೆಯಿಂದ ಬೆಳ್ಳೂಡಿ ಗ್ರಾಮದ ಮುಖ್ಯ ವೃತ್ತದವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಅನದಾನ ನೀಡುವಂತೆ ಸೋಮವಾರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜಾನಂದ ಪುರಿ ಸ್ವಾಮೀಜಿ ಅವರ ನೇತೃತ್ವದ ನಿಯೋಗವು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಮನವಿ ಮಾಡಿದರು.
ಶ್ರೀಗಳ ಕೋರಿಕೆಗೆ ತಕ್ಷಣ ಸ್ಪಂದಿಸಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿ ಕೂಡಲೇ ಬೆಳ್ಳೂಡಿ ರಸ್ತೆಗೆ ಕಾಂಕ್ರೀಟ್ ಹಾಕಿಸುವ ಕಾಮಗಾರಿಯ ಯೋಜನಾ ವರದಿ ನೀಡುವಂತೆ ಸೂಚಿಸಿ, ಏಪ್ರಿಲ್ ತಿಂಗಳ ಒಳಗೆ ಸಿಸಿ ರಸ್ತೆ ನಿರ್ಮಾಣವಾಗಲಿದೆ ಎಂಬ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ `ಜನತಾವಾಣಿ’ಗೆ ತಿಳಿಸಿದ್ದಾರೆ.
ಬೆಳ್ಳೂಡಿ ಗ್ರಾ.ಪಂ. ಅಧ್ಯಕ್ಷ ಉಮೇಶ್, ಗ್ರಾ.ಪಂ. ಸದಸ್ಯರಾದ ದುಂಡಿ ಸಿದ್ದೇಶ್, ಶಂಕ್ರಣ್ಣ, ವೀರೇಶ್ ಪೂಜಾರ್, ಯುವರಾಜ್ ಯು.ಬಿ.ಶಿವಕುಮಾರ್ ಸಿದ್ಧಾರ್ಥ ಮತ್ತಿತರರು ನಿಯೋಗದಲ್ಲಿದ್ದರು.