ಕೆಪಿಜೆಪಿ-ಬಿಜೆಪಿ ಭಿನ್ನಮತ: ರಾಣೇಬೆನ್ನೂರು ನಗರಸಭೆ ಕಾಂಗ್ರೆಸ್ ವಶಕ್ಕೆ

ಕೆಪಿಜೆಪಿ-ಬಿಜೆಪಿ ಭಿನ್ನಮತ: ರಾಣೇಬೆನ್ನೂರು ನಗರಸಭೆ ಕಾಂಗ್ರೆಸ್ ವಶಕ್ಕೆ

ಅಧ್ಯಕ್ಷರಾಗಿ ಚಂಪಕಾ ಬಿಸಲಹಳ್ಳಿ, ನಾಗರಾಜ ಪವಾರ ಉಪಾಧ್ಯಕ್ಷ

ರಾಣೇಬೆನ್ನೂರು,ಜ.28- ಇಂದು ನಡೆದ ಇಲ್ಲಿನ ನಗರಸಭೆ ಚುನಾವಣೆಯಲ್ಲಿ  ಅಧ್ಯಕ್ಷರಾಗಿ ಕಾಂಗ್ರೆಸ್ ಚಂಪಕಾ ಬಿಸಲಹಳ್ಳಿ, ಉಪಾಧ್ಯಕ್ಷರಾಗಿ ಕೆಪಿಜೆಪಿಯ ನಾಗರಾಜ ಪವಾರ ಅವರು ಹೆಚ್ಚು ಮತ ಗಳಿಸಿ ಆಯ್ಕೆಯಾದರು.

ಶಾಸಕ ಪ್ರಕಾಶ ಕೋಳಿವಾಡ  ಸೇರಿದಂತೆ ಕಾಂಗ್ರೆಸ್‌ ಹತ್ತು ಸದಸ್ಯರನ್ನು  ಹೊಂದಿತ್ತು.  ಕೆಪಿಜೆಪಿ  ಸಹ ಹತ್ತು ಸದಸ್ಯರನ್ನು ಹೊಂದಿತ್ತು.  ಆದರೆ ಬಿಜೆಪಿ  15 ಸದಸ್ಯರನ್ನು ಹೊಂದಿದ್ದರೂ, ಕಾಂಗ್ರೆಸ್ ಹೊರತು ಪಡಿಸಿ ಉಳಿದ ಸದಸ್ಯರಲ್ಲಿ ಭಿನ್ನಮತ, ಸದಸ್ಯರ ಗೈರು ಹಾಜರಿ, ತಟಸ್ಥ ನಿಲುವು. ಈ ಎಲ್ಲ ಚಟುವಟಿಕೆಗಳಿಂದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ‌ 33 ಸದಸ್ಯರಲ್ಲಿ 16 ಮತಗಳನ್ನು ಅಧ್ಯಕ್ಷರು, 18 ಮತಗಳನ್ನು ಉಪಾಧ್ಯಕ್ಷರು ಪಡೆದಿದ್ದು,  ಈರ್ವರ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಿಸಿದರು.

15 ಸದಸ್ಯರನ್ನು ಹೊಂದಿದ್ದ ಬಿಜೆಪಿ, ಈಗಾಗಲೇ ತಮ್ಮ ಬಳಿ ಇದ್ದ  ಕೆಪಿಜೆಪಿಯ 6 ಹಾಗೂ  ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ನಗರಸಭೆ ಆಡಳಿತ ಹಿಡಿಯಲು ಸ್ಪಷ್ಟ ಬಹುಮತದ  22 ಸದಸ್ಯರನ್ನೂ  ಹೊಂದಿದ್ದರೂ,  ಮೊದಲ ಅವಧಿಯ   ಆಡಳಿತವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರೂ ಸಹ, ಅದನ್ನು ಉಳಿಸಿಕೊಳ್ಳಲು  ಸಾಧ್ಯವಾಗಲಿಲ್ಲ.  ಅಧ್ಯಕ್ಷ ಸ್ಥಾನದ ಬಿಜೆಪಿ ಅಭ್ಯರ್ಥಿ ಕವಿತಾ ಹೆದ್ದೇರಿ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ, ಮಾಜಿ ಶಾಸಕ ದಿ. ಜಿ.ಶಿವಣ್ಣ ಪುತ್ರ ಗುರುರಾಜ ತಿಳುವಳ್ಳಿ ತಲಾ  10  ಮತಗಳಿಗೆ ತೃಪ್ತಿ ಪಡುವಂತಾಯಿತು.

ಸದಸ್ಯೆ ಅಸ್ವಸ್ಥ.. ಉಪಾಧ್ಯಕ್ಷ ಸ್ಥಾನದ  ಮತದಾನದ ಪ್ರಕ್ರಿಯೆ ಮುಗಿಯುತ್ತಿದ್ದಂತೆ ತೀವ್ರ ಅಸ್ವಸ್ಥಗೊಂಡ 18ನೇ ವಿಭಾಗದ ಸದಸ್ಯೆ ನೀಲಮ್ಮ ಮಾಕನೂರ ಅವರನ್ನು  ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಉಳಿದ ಸಭೆಯ ಯಾವ ಪ್ರಕ್ರಿಯಲ್ಲೂ  ಅವರು ಭಾಗವಹಿಸಲು ಸಾಧ್ಯವಾಗದ್ದರಿಂದ ಅವರನ್ನು ಗೈರುಹಾಜರಿ ಎಂದು ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ಚುನಾವಣಾ ಪ್ರಕ್ರಿಯೆ ಮುಗಿದ ನಂತರ ವಿನಾಯಕ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ನಗರದ ರಿಂಗ್ ರಸ್ತೆ, ದೊಡ್ಡಕೆರೆ ಅಭಿವೃದ್ಧಿ ಒಟ್ಟಾರೆ ನಗರದ ಸಮಗ್ರ ಅಭಿವೃದ್ಧಿ ನಮ್ಮ ಪಕ್ಷದ ಅಧ್ಯಕ್ಷರ ಅವಧಿಯಲ್ಲಿಯೇ ಮಾಡುವುದಾಗಿ ತಿಳಿಸಿದರು. 

ನೂತನ ಅಧ್ಯಕ್ಷೆ ಚಂಪಕಾ ಬಿಸಲಹಳ್ಳಿ ಅವರು ಮಾತನಾಡಿ, ಈಗ ನಮ್ಮ ಪಕ್ಷದ ಸರ್ಕಾರವೇ ಇದ್ದು, ನಮ್ಮವರೇ ಶಾಸಕರಿದ್ದು, ನಗರಸಭೆಯ ಎಲ್ಲ ಸದಸ್ಯರ ಸಹಕಾರದೊಂದಿಗೆ ನಗರದ  ನಾಗರಿಕರ ಮೆಚ್ಚುಗೆ ಪಡೆಯುವ ದಿಸೆಯಲ್ಲಿ ಅಭಿವೃದ್ಧಿ ಪಡಿಸಿ, ನನಗೆ ಸಿಕ್ಕ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ ಎಂದರು.

error: Content is protected !!