ಕರ್ನಾಟಕ ಏಕೀಕರಣದಲ್ಲಿ ಕಸಾಪ ಕೊಡುಗೆ ಬಹು ಮುಖ್ಯ

ಕರ್ನಾಟಕ ಏಕೀಕರಣದಲ್ಲಿ ಕಸಾಪ ಕೊಡುಗೆ ಬಹು ಮುಖ್ಯ

ಟಿ.ಎಂ. ಸೋಮಲಿಂಗಯ್ಯ ದತ್ತಿ ಕಾರ್ಯಕ್ರಮದಲ್ಲಿ ಶಿಕ್ಷಕ ಡಾ. ಚೇತನ ಬಣಕಾರ್

ಹರಪನಹಳ್ಳಿ, ಜ.28- ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕೊಡುಗೆ ಹಾಗೂ ಭಾಷಾವಾರು ಪ್ರಾಂತ್ಯಗಳಿಗಾಗಿ ನಡೆದ ಹೋರಾಟ ಬಹಳ ಮುಖ್ಯವಾದದ್ದು ಎಂದು ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಡಾ. ಚೇತನ ಬಣಕಾರ್ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಟಿ.ಎಂ. ಸೋಮಲಿಂಗಯ್ಯ ದತ್ತಿ ಹಾಗೂ ದಿ.ಹೆಚ್ ಬಸಪ್ಪ ದತ್ತಿ, ಬಾಗಳಿ ಕೆಂಚಮ್ಮ ಮಾಗಳದ ಮಲ್ಲಿಕಾರ್ಜುನಪ್ಪ ದತ್ತಿ, ದಿ.ಡಾ.ಎನ್ ರಾಮಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸವಿದೆ. ಇಂತಹ ಭಾಷೆಯನ್ನು ಕೇವಲ ನವೆಂಬರ್ ತಿಂಗಳಿಗೆ ಸಿಮಿತಗೋಳಿಸದೇ, ವರ್ಷಪೂರ್ತಿ ಕನ್ನಡ ಆರಾಧನೆ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕಿದೆ.  ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಹೆಚ್ಚಿನ ಅಭಿಮಾನ, ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕನಕದಾಸರ ಸಾಹಿತ್ಯ ಹಾಗೂ ಜನಪದ ಸಾಹಿತ್ಯ ಕುರಿತು ಮಾತನಾಡಿದ ಎಸ್.ಯು.ಜೆ.ಎಂ. ಕಾಲೇಜು ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ್‌ ಅವರು, ಸಮಾಜದಲ್ಲಿ ಮನುಷ್ಯರನ್ನು ಜಾತಿ ಹೆಸರಿನಲ್ಲಿ ಮೇಲು-ಕೀಳು ಎಂದು ಅವಮಾನಿಸುತ್ತಿದ್ದ ವ್ಯವಸ್ಥೆಯನ್ನು ಕನಕದಾಸರು 16ನೇ ಶತಮಾನದಲ್ಲಿಯೇ ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಶ್ರಮಿಸಿದ್ದರು ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಕನಕದಾಸರು ಸೇರಿದಂತೆ ಹಲವು ಮಹಾನ್ ನಾಯಕರು ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಿ, ಸಮಾನತೆ ಮೂಡಿಸಲು ಶ್ರಮಿಸಿದ್ದಾರೆ. ಅವರ ಸಂದೇಶಗಳು ಸದಾ ಜೀವಂತವಾಗಿವೆ ಮತ್ತು ಮನುಷ್ಯ ಜೀವನದ ಬದಲಾವಣೆಗೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.

ಜನಪದ ಸಾಹಿತ್ಯ ಗ್ರಾಮೀಣ ಪ್ರದೇಶದ ಸೊಗಡನ್ನು ಹೊಂದಿದೆ. ತಲೆಯಿಂದ ತಲೆಮಾರಿಗೆ ಜನಪದ ಸಾಹಿತ್ಯ ಶ್ರೀಮಂತವಾಗಿದ್ದು, ಪ್ರಸ್ತುತ ಮೊಬೈಲ್ ಹಾವಳಿಯಿಂದ ಜನಪದ ಸೊರಗುತ್ತಿದೆ ಎಂದು ವಿಷಾದಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ನೆಲ-ಜಲ-ಭಾಷೆ ಉಳಿಸುವ ಕೆಲಸ ಮಾಡುತ್ತಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸುತ್ತಾ ಬಂದಿದೆ ಎಂದರು.

ಈ ವೇಳೆ ಸಾಹಿತಿ ಕೋಡಿಹಳ್ಳಿಯ ಬಸವರಾಜಪ್ಪ ಪೂಜಾರ್, ಕರ್ನಾಟಕ ರಕ್ಷಣಾ ವೇದಿಕೆಯ ಮಾಜಿ ಅಧ್ಯಕ್ಷ ಬಸವರಾಜ ಹುಲಿಯಪ್ಪನವರ್, ವಕೀಲ ಕೆ. ತಿರುಮಲ, ಮತ್ತಿಹಳ್ಳಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿದ್ದಪ್ಪ, ಕಸಾಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಜಿ. ಮಹಾದೇವಪ್ಪ, ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯ ಅಧ್ಯಕ್ಷೆ ಸ್ವಪ್ನ ಮಲ್ಲಿಕಾರ್ಜುನ್‌, ಶಿಕ್ಷಕರಾದ ಟಿ.ಎಂ. ಬಸವರಾಜ್‌, ಹೊನ್ನಪ್ಪ, ಮಾಲಾ ವಿ. ಹಿರೇಮಠ್, ಬಿ.ಆರ್ ಮಂಜುನಾಥ, ಕೆ. ರಾಜು, ಅಕ್ಕಮಹಾದೇವಿ, ಎಸ್‌.ವಿ. ಶ್ರೀನಿವಾಸ, ಕೆ ಬಸವರಾಜ್‌ ಇತರರು ಇದ್ದರು.

error: Content is protected !!