ಜಗಳೂರು, ಜ.28- ಅಲ್ಪ ಸಂಖ್ಯಾತರ ಇಲಾಖೆಯಿಂದ ಮಂಜೂರಾಗಿರುವ ಎರಡು ಕೋಟಿ ರೂ.ಗಳ ಅನುದಾನದ ಸಿಸಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮತ್ತು ಎಸ್.ವಿ. ರಾಮಚಂದ್ರ ಆರೋಪಿಸಿದರು.
ಬುಧವಾರ ರಸ್ತೆ ವೀಕ್ಷಣೆ ಮಾಡಿದ ಅವರು, ಶಾಸಕರು ಭೂಮಿ ಪೂಜೆ ನೆರವೇರಿಸಿದ ಎರಡು ತಿಂಗಳಲ್ಲೇ ಮುಕ್ತಾಯದ ಹಂತಕ್ಕೆ ಬಂದಿದೆ ಎಂದರೆ, ಕಳಪೆ ಕಾಮಗಾರಿ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ ಎಂದರು.
ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರು ಬಿಬಿಎಂಪಿ 4ನೇ ಡಿವಿಷನ್ಗೆ ನೀಡಲಾಗಿದೆ. ಇದರ ಉದ್ದೇಶವಾದರೂ ಏನು? ದಾವಣಗೆರೆಯ ಕೆಆರ್ಡಿ ಎಲ್ಗೆ ನೀಡಬಹುದಿತ್ತು. ಆದರೆ ಬೆಂಗಳೂರಿನವರಿಗೆ ಏಕೆ ನೀಡಿದ್ದೀರಿ? ಕಾಮಗಾರಿಯನ್ನು ನೋಡಲಿಕ್ಕೆ ಬೆಂಗಳೂರಿನಿಂದ ಎಂಜಿನಿಯರ್ ಬರಬೇಕೇ? ಇದರ ಉದ್ದೇಶವಾದರೂ ಏನು ಎಂದು ಅವರು ಪ್ರಶ್ನಿಸಿದರು.
ಕಾಮಗಾರಿ ನಿಯಮಗಳ ಅನುಸಾರ ರಸ್ತೆಯ ಅಕ್ಕ-ಪಕ್ಕ ಚರಂಡಿಗಳನ್ನು ನಿರ್ಮಿಸಬೇಕು. ನಂತರ ಸಿಸಿ ರಸ್ತೆ ನಿರ್ಮಾಣವಾಗಬೇಕು. ಆದರೆ ಅದಾವುದನ್ನೂ ಮಾಡದೇ ಕಳಪೆ ಸಿಮೆಂಟ್ ಹಾಕಿ ಸಿಸಿ ರಸ್ತೆ ಮಾಡಿದ್ದಾರೆ ಎಂದು ದೂರಿದರು.
ಸಿಮೆಂಟ್ ಹಾಕುವ ಮೊದಲು 6 ಇಂಚು ವೈಟ್ ಮಿಕ್ಸ್ ಸಿಮೆಂಟ್ ಮಿಶ್ರಣ ಹಾಕಬೇಕು. ಸ್ಟೀಲ್ ಅಳವಡಿಕೆ ಮಾಡಬೇಕು. ಪ್ಲಾಸ್ಟಿಕ್ ಕವರ್ಗಳನ್ನು ಹಾಕಿದ ನಂತರ 6 ಇಂಚು ಸಿಮೆಂಟ್ ಕಾಂಕ್ರೀಟ್ ಹಾಕಬೇಕು. ಆದರೆ ಈ ನಿಯಮಗಳನ್ನು ಪಾಲಿಸಿಲ್ಲ. ಸರಿಯಾಗಿ ನೀರಿನ ಕ್ಯೂರಿಂಗ್ ಮಾಡಿಲ್ಲ. ಬೇಕಾ ಬಿಟ್ಟಿ ತರಾತುರಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪಟ್ಟಣ ಪಂಚಾಯಿತಿ ಅನುಮತಿ ಇಲ್ಲದೇ ಸರಕಾರಿ ನೌಕರರ ಸಂಘದ ಕಟ್ಟಡವನ್ನು ನೆಲಸಮ ಮಾಡಿರುವುದು ಕಾನೂನು ಬಾಹಿರ. ಕಟ್ಟಡ ಕೆಡವಿದ ನಂತರ ಡ್ರೈನೇಜ್ ಮಾಡುತ್ತೇವೆ ಎಂದು ಹೇಳಿದ್ದ ಶಾಸಕರು, ಅದನ್ನು ಗುತ್ತಿಗೆದಾರರಿಂದ ಮಾಡಿಸಿಲ್ಲ. ಕಟ್ಟಡ ನೆಲ ಸಮದ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ. ಶಾಸಕರ ಹಿಂಬಾಲಕರಿಗೆ ನೆಲೆ ಕಲ್ಪಿಸಲು ಈ ಕಟ್ಟಡವನ್ನು ನೆಲಸಮ ಮಾಡಲಾಗಿದೆ ಎಂದು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಆರೋಪಿಸಿದರು.
ಪಟ್ಟಣದಲ್ಲಿ ಏನಾಗುತ್ತಿದೆ ಎಂದು ಪಪಂ ಅಧ್ಯಕ್ಷರ ಗಮನಕ್ಕೆ ತಾರದೇ ಯಾವುದೇ ಮಾಹಿತಿ ಇಲ್ಲದೆ. ಕೆಲಸವನ್ನು ಮಾಡಲಾಗುತ್ತಿದೆ ಎಂದು ಪಪಂ ಅಧ್ಯಕ್ಷ ನವೀನ್ಕುಮಾರ್ ತಿಳಿಸಿದರು.
ಸಿಸಿ ರಸ್ತೆ ಕಾಮಗಾರಿ ಕಳಪೆಯಾಗಿದ್ದರೆ ತಕ್ಷಣವೇ ಕೆಲಸವನ್ನು ಸ್ಥಗಿತಗೊಳಿಸಬೇಕು. ಗುಣ ಮಟ್ಟದ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ಕಾನನಕಟ್ಟೆ ಕುಬೇರಪ್ಪ, ಸೂರಲಿಂಗಪ್ಪ, ರೇವಣ್ಣ, ಲೋಕೇಶ್, ಮಂಜುನಾಥ್, ಓಬಳೇಶ್, ಬೋರಣ್ಣ ಸೇರಿದಂತೆ ಮತ್ತಿತರರು ಇದ್ದರು.