ರಾಜನಹಳ್ಳಿಯಲ್ಲಿ ಬ್ಯಾರೇಜ್ ನಿರ್ಮಾಣ ಕಾಮಗಾರಿ ಪರಿಶೀಲನೆ

ರಾಜನಹಳ್ಳಿಯಲ್ಲಿ ಬ್ಯಾರೇಜ್ ನಿರ್ಮಾಣ ಕಾಮಗಾರಿ ಪರಿಶೀಲನೆ

ದಾವಣಗೆರೆ, ಜ. 27 – ಸ್ಮಾರ್ಟ್ ಸಿಟಿ ವತಿಯಿಂದ ರಾಜನಹಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್ ಅವರು ಇಂದು ಪ್ರಗತಿ ಪರಿಶೀಲನೆ ನಡೆಸಿದರು. 

ಕಳೆದ 2 ವರ್ಷಗಳಿಂದ ಬ್ಯಾರೇಜ್‌ಗೆ ಗೇಟ್ ಅಳವಡಿಸುವ ಕೆಲಸ ಬಾಕಿ ಇದ್ದು ಮಳೆಗಾಲ ಪ್ರಾರಂಭವಾಗುವ ಒಳಗೆ ಎಲ್ಲಾ 42 ಗೇಟ್‌ಗಳನ್ನು ಅಳವಡಿಸಬೇಕು ಮತ್ತು ಅದಕ್ಕಾಗಿ  ಒಂದು ವಾರದೊಳಗೆ ಅಳವಡಿಸಲು ಬೇಕಿರುವ ಅಗತ್ಯ ವಸ್ತುಗಳ ಜೊತೆಗೆ ಶೀಘ್ರವಾಗಿ ಕೆಲಸ ಪ್ರಾರಂಭಿಸಿ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. 

ಈ ಕಾಮಗಾರಿಯು ಪೂರ್ಣಗೊಂಡರೆ ನಗರದಲ್ಲಿ ಜಲಸಿರಿ ಯೋಜನೆಯಲ್ಲಿ ಮುಂದಿನ 20 ವರ್ಷಗಳ ದೂರ ದೃಷ್ಟಿಯ ನೀರು ಪೂರೈಸಲು ಅಗತ್ಯವಿರುವ 0.2ಟಿಎಂಸಿ ನೀರನ್ನು ಒಟ್ಟು 12.5 ಕಿಲೋ ಮೀಟರ್ ನದಿ ಪಾತ್ರದಲ್ಲಿ ಸಂಗ್ರಹಿಸಬಹುದಾಗಿದೆ. ಬೇಸಿಗೆಯಲ್ಲಿ ನೀರಿನ ಸಂಗ್ರಹಣೆ ಮತ್ತು ಪೂರೈಕೆಗೆ ತ್ವರಿತವಾಗಿ ಬ್ಯಾರೇಜ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವುದು ಅತ್ಯಂತ ಅವಶ್ಯಕವಾಗಿದ್ದು, ಗುತ್ತಿಗೆದಾರರು ಅಗತ್ಯ  ಯಂತ್ರಗಳೊಂದಿಗೆ ಮಾನವ ಸಂಪನ್ಮೂಲ ಹೆಚ್ಚಿಸಿ ಬೇಗನೆ ಕಾಮಗಾರಿ ಮುಗಿಸಲು ತಿಳಿಸಿದರು. 

ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್,  ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ಉದಯ್ ಕುಮಾರ್, ಸಚಿನ್, ಜೋಶಿ ಇತರೆ ಅಧಿಕಾರಿಗಳು ಹಾಜರಿದ್ದರು.

error: Content is protected !!