ದಾವಣಗೆರೆ, ಜ. 27- ಹೊನ್ನಾಳಿ ಪಟ್ಟಣದ ದುರ್ಗಿಗುಡಿ ನಿವಾಸಿ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಭಾನುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದು, ಫೈನಾನ್ಸ್ ಕಂಪನಿ ಸಾಲಗಾರರ ಕಿರುಕುಳದಿಂದ ಬೇಸತ್ತು ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬದವರು ಶಂಕಿಸಿದ್ದಾರೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪುಷ್ಪಲತಾ ಎಂ.ಟಿ. (46) ಕಾಣೆಯಾದವರು. ಇಲ್ಲಿನ ರಾಘವೇಂದ್ರ ಮಠದ ಬಳಿ ಸ್ವಲ್ಪ ಹೊತ್ತು ಕುಳಿತು, ಬಳಿಕ ನದಿಗೆ ಇಳಿದಿರುವುದು ಸಿ.ಸಿ. ಟಿವಿ ಫೂಟೇಜ್‌ನಲ್ಲಿ ಪತ್ತೆಯಾಗಿದೆ. ಅವರ ಚಪ್ಪಲಿ ಹಾಗೂ ಬ್ಯಾಗ್ ಸಮೀಪದಲ್ಲೇ ದೊರೆತಿವೆ.
ಹಾಲೇಶ್ ಅವರು ನೀಡಿದ ದೂರು ಆಧರಿಸಿ, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞರು ಸೋಮವಾರ ಸಂಜೆವರೆಗೂ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದು ಪುಷ್ಪಲತಾ ಅವರು ಪತ್ತೆಯಾಗಿಲ್ಲ.
ಎಸ್ಪಿ ಸ್ಪಷ್ಟನೆ: ಶಿಕ್ಷಕಿ ಪುಷ್ಪಲತಾ ಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.
ಶಿವಮೊಗ್ಗದ ಟಾಟಾ ಕ್ಯಾಪಿಟಲ್ ಫೈನಾನ್ಸ್ ನಲ್ಲಿ 35 ರಿಂದ 40 ಲಕ್ಷ ರೂ. ಸಾಲ ಪಡೆದಿರುವ ಮಾಹಿತಿ ತಿಳಿದು ಬಂದಿದೆ. ನದಿಗೆ ಹಾರಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟತೆ ಇಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದವರು ಹೇಳಿದ್ದಾರೆ. ಪೊಲೀಸ್ ಇಲಾಖೆಯಿಂದ ಕೂಡ ಶಿಕ್ಷಕಿ ತುಂಗಭದ್ರಾ ನದಿಗೆ ಹಾರಲು ಕಾರಣವೇನು ಎಂಬ ಕುರಿತಂತೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ದೂರು ದಾಖಲಾದ ಬಳಿಕ, ಮಾಹಿತಿ ಕಲೆ ಹಾಕಿದ ನಂತರ ಶಿಕ್ಷಕಿ ನದಿಗೆ ಹಾರಿದ್ದರ ಕುರಿತಂತೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಉಮಾ ಪ್ರಶಾಂತ್ ತಿಳಿಸಿದ್ದಾರೆ.