ರಾಣೇಬೆನ್ನೂರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ
ರಾಣೇಬೆನ್ನೂರು,ಜ.27- ನಮ್ಮ ಸಂವಿಧಾನದ ಆಚರಣೆಯೇ ಗಣರಾಜ್ಯೋತ್ಸವ. ಸಮಾನತೆ, ಭ್ರಾತೃತ್ವ, ಸೋದರತ್ವ ಮತ್ತು ವೈಚಾರಿಕತೆ ಹಾಗೂ ವೈಜ್ಞಾನಿಕವಾಗಿ ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ರಚಿಸಿದ ನಮ್ಮ ಸಂವಿಧಾನವೇ ಭಾರತೀಯರ ಭಗವದ್ಗೀತೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರಸಭೆ ಕ್ರೀಡಾಂಗಣದಲ್ಲಿ ನಡೆದ 76ನೇ ಪ್ರಜಾರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಕಾಶ ಕೋಳಿವಾಡ, ಪೊಲೀಸ್, ಗೃಹರಕ್ಷಕ ದಳ, ಎನ್ಸಿಸಿ ಹಾಗೂ ಶಾಲಾ ಮಕ್ಕಳಿಂದ ವಂದನೆ ಸ್ವೀಕರಿಸಿ ಮಾತನಾಡಿದರು.
ನಗರದ ದೊಡ್ಡಕೆರೆ ಅಭಿವೃದ್ಧಿ, ತುಂಗಾ ಮೇಲ್ದಂಡೆ ಯೋಜನೆಯ ತಡೆಗೋಡೆ ನಿರ್ಮಾಣ, ಗ್ರಾಮಗಳಲ್ಲಿ ವಿವಿಧ ಜನಪರ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ 271 ಕೋಟಿ ಸೇರಿದಂತೆ ತಾಲ್ಲೂಕಿನಲ್ಲಿ ಇದುವರೆಗೆ ಒಟ್ಟು ಸರ್ಕಾರ 376 ಕೋಟಿ ಅನುದಾನ ನೀಡಿದೆ ಎಂದು ಹೇಳಿದರು.
ಮೊದಲಿಗೆ ಅಶೋಕ ವೃತ್ತದಲ್ಲಿ ನಂತರ ಕ್ರೀಡಾಂಗಣದಲ್ಲಿ ತಹಶೀಲ್ದಾರ್ ಆರ್.ಎಚ್. ಭಾಗವಾನ ಧ್ವಜವಂದನೆ ನೆರವೇರಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಮಂಜನಗೌಡ ಪಾಟೀಲ, ಮಾರ್ಕೆಟಿಂಗ್ ಸೊಸೈಟಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರು, ನಗರಸಭೆ ನಾಮಕರಣ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಲಯನ್ಸ್ ಶಾಲೆಯಲ್ಲಿ ಹಾಗೂ ಸಿದ್ದೇಶ್ವರ ಬ್ಯಾಂಕ್ ನಲ್ಲಿ ಮಲ್ಲೇಶಣ್ಣ ಅರಕೇರಿ, ನಗರಸಭೆಯಲ್ಲಿ ಪೌರಾಯುಕ್ತ ಪಕ್ಕೀರಪ್ಪ, ಗಂಗಾ ಬ್ಯಾಂಕ್ನಲ್ಲಿ ಅಧ್ಯಕ್ಷ ರತ್ನಾಕರ ಕುಂದಾಪುರ, ನೆಹರು ಮಾರ್ಕೆಟ್ ವರ್ತಕರ ಸಂಘದಲ್ಲಿ ಅಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಎಪಿಎಂಸಿಯಲ್ಲಿ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಕಾಂಗ್ರೆಸ್ ಕಾರ್ಯಾಲಯದಲ್ಲಿ ಅಧ್ಯಕ್ಷ ಮಂಜನಗೌಡ ಪಾಟೀಲ, ಬಿಜೆಪಿ ಕಾರ್ಯಾಲಯದಲ್ಲಿ ಅಧ್ಯಕ್ಷ ಪರಮೇಶ ಗೂಳಣ್ಣನವರ, ಇಲಾಖೆ ಮುಖ್ಯಸ್ಥರು ತಮ್ಮ ಕಛೇರಿಗಳಲ್ಲಿ ಧ್ವಜ ವಂದನೆ ನೆರವೇರಿಸಿದರು.