ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕ್ಷೇತ್ರೀಯ ಸಂಯೋಜಕ ಜಗದೀಶ್ ಕಾರಂತ್ ಬೇಸರ
ದಾವಣಗೆರೆ, ಜ.26- ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳು ಕೂಡ ಸರ್ಕಾರಿ ಆಚರಣೆಗೆ ಸೀಮಿತವಾಗಿರುವುದು ದುರಂತ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕ್ಷೇತ್ರೀಯ ಸಂಯೋಜಕ ಜಗದೀಶ್ ಕಾರಂತ್ ಬೇಸರ ವ್ಯಕ್ತಪಡಿಸಿದರು.
ನಗರದ ರಾಷ್ಟೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಸಂಜೆ ಭಾರತ ವಿಕಾಸ ಪರಿಷದ್, ಸ್ವಾಮಿ ವಿವೇಕಾನಂದ ಶಾಖೆ ವತಿಯಿಂದ ಭಾರತ ಮಾತಾ ಪೂಜನ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸವಾಲುಗಳು ಮತ್ತು ಜನಜಾಗೃತಿ ಎಂಬ ವಿಷಯವಾಗಿ ಅವರು ಉಪನ್ಯಾಸ ನೀಡಿದರು.
ರಾಷ್ಟ್ರೀಯ ಹಬ್ಬಗಳಲ್ಲಿ ಜನರು ಸಂಭ್ರಮದಿಂದ ಪಾಲ್ಗೊಳ್ಳುವ ವಾತಾವರಣ ಕಡಿಮೆ ಇದೆ. ನಿರಂತರ ರಜೆ ಬಂದರಂತೂ ಬಂಧು-ಮಿತ್ರದೊಂದಿಗೆ ಪ್ರವಾಸ ಹೋಗು ವುದು ಸಾಮಾನ್ಯವಾಗಿದೆ. ಸಮಾಜಕ್ಕೊಂದು ಸೂಕ್ತ ದಿಕ್ಕು-ದೆಸೆ, ಮೇಲ್ಪಂಕ್ತಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ ಎಂದರು.
ಇತಿಹಾಸ ವಿಸ್ಮೃತಿ ಹಾಗೂ ದೇಶದ ಬಗೆಗಿನ ನಿರಭಿಮಾನದಿಂದಾಗಿ ರಾಷ್ಟ್ರೀಯ ಹಬ್ಬಗಳು ಸರ್ಕಾರಿ ಆಚರಣೆಗಳಾಗಿ ಸೀಮಿತವಾಗಿದ್ದು, ಸಾರ್ವಜನಿಕ ಸಹಭಾಗಿತ್ವ ಇಲ್ಲವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಹಬ್ಬಗಳಂದು ಬರೀ ಗಾಂಧಿಗಳಿಗೆ ಜೈಕಾರ ಕೇಳಿಬರುತ್ತದೆ. ನೇತಾಜಿ ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್ ಹೆಸರೇ ಕೇಳುವುದಿಲ್ಲ. ಇದಕ್ಕಿಂತ ದೊಡ್ಡ ದ್ರೋಹ ಇನ್ನೊಂದಿಲ್ಲ.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಹೋರಾಟದಿಂದಲೇ ಹೊರತು ಭಿಕ್ಷೆಯಿಂದಲ್ಲ. ಲಕ್ಷಾಂತರ ದೇಶಭಕ್ತರು ಇದಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. ಇದನ್ನೆಲ್ಲಾ ಮುಚ್ಚಿಟ್ಟು, ಕೆಲವೇ ವ್ಯಕ್ತಿಗಳಿಂದ ಸ್ವಾತಂತ್ರ್ಯ ಬಂದಿದೆ ಎಂಬ ಸುಳ್ಳನ್ನು ಹರಡಲಾಗಿದೆ. ಹೀಗಾಗಿ ಇಂದಿನ ಯುವಪೀಳಿಗೆಗೆ ಸ್ವಾತಂತ್ರ್ಯದ ಮಹತ್ವ ಗೊತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಗಾಂಧಿಯಿಂದಲೇ ಸ್ವಾತಂತ್ರ್ಯ ಹೋರಾಟ ಆರಂಭವಾಗಿಲ್ಲ. ಭಾರತದಂತೆ ದೀರ್ಘಕಾಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರ ಜಗತ್ತಿ ನಲ್ಲಿ ಮತ್ತೊಂದಿಲ್ಲ. ಇಸ್ಲಾಂ ಕಾಲಿಟ್ಟ ಕಡೆಗೆಲ್ಲ ಅಲ್ಲಿನ ನೆಲ, ನಾಗರಿಕತೆ ಸಂಪೂರ್ಣ ನಾಶವಾ ಗಿವೆ. ಆದರೆ ನೂರಾರು ವರ್ಷಗಳ ಇಸ್ಲಾಮೀ ಆಕ್ರಮಣದ ನಡುವೆಯೂ ಜೀವಂತವಾಗಿ ಉಳಿದಿರುವ ಏಕೈಕ ಸಮಾಜ ನಮ್ಮದು. ಇಂತ ಹ ವೀರ ಪರಂಪರೆಯವರನ್ನು ಹೇಡಿಗಳಂತೆ ಬಿಂಬಿಸುವ ಪ್ರಯತ್ನ ಸ್ವಾತಂತ್ರ್ಯ ಪೂರ್ವದಿಂ ದಲೂ ನಡೆದಿದೆ. ಈ ಸಮಾಜ ಹೇಡಿಯಾಗಿದ್ದರೆ ದೇಶಕ್ಕೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ ಎಂಬುದನ್ನು ಯಾರೂ ಮರೆಯಬಾರದು ಎಂದು ಅವರು ಸಲಹೆ ನೀಡಿದರು.
ಭಾರತ ವಿಕಾಸ ಪರಿಷದ್, ಸ್ವಾಮಿ ವಿವೇಕಾನಂದ ಶಾಖೆ ಅಧ್ಯಕ್ಷ ಎನ್.ಪಿ.ಮೌನೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಗನೂರು ಬಸಪ್ಪ ಪಿಯು ಕಾಲೇಜು ಪ್ರಾಂಶುಪಾಲ ಪ್ರಸಾದ್ಎಸ್.ಬಂಗೇರ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಹೆಚ್.ಜಯಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.