ಸಚಿವ ಎಚ್.ಕೆ. ಪಾಟೀಲ
ರಾಣೇಬೆನ್ನೂರು, ಜ.20- ಅಂಧ ಶ್ರದ್ಧೆ, ಜಾತೀಯತೆ, ಬಡವ-ಬಲ್ಲಿದ, ಮೇಲು-ಕೀಳು ಎನ್ನುವ ಭಾವನೆಗಳನ್ನು ಕಿತ್ತೊಗೆದು, ಸರ್ವರಲ್ಲಿ ಸಮಭಾವ ತರುವ ಪ್ರಯತ್ನವು ಮಹಾಯೋಗಿ ವೇಮನರದಾಗಿತ್ತು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಇಲ್ಲಿನ ರೆಡ್ಡಿ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಭಾನುವಾರ ನಡೆದ 613 ನೇ ವೇಮನ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೇಮನರು, ಬದುಕನ್ನ ಸರಳೀಕರಣಗೊಳಿಸುವ ವಚನಗಳನ್ನು ರಚಿಸಿ ಶ್ರೇಷ್ಠ ವಚನಕಾರರಾಗಿದ್ದಾರೆ ಮತ್ತು ರೆಡ್ಡಿಗಳು ಪರರ ಸುಖ-ದುಃಖಗಳಲ್ಲಿ ಪಾಲ್ಗೊಂಡು ಬದುಕುವಂತೆ ಕಲಿಸಿಕೊಟ್ಟಿದ್ದಾರೆ ವೇಮನರ ತತ್ವ ಚಿಂತನೆಗಳನ್ನ ಪಾಲಿಸುವ ರೆಡ್ಡಿಗಳು ರಾಜಕಾರಣದಲ್ಲಿ ಯಶಸ್ಸು ಪಡೆದಿದ್ದಾರೆ ಎಂದು ಹೇಳಿದರು.
ಉಪಸಭಾಪತಿ ರುದ್ರಪ್ಪ ಲಮಾಣಿ ಮಾತ ನಾಡಿ, ರೆಡ್ಡಿ ಸಮಾಜದ ಸಹಾಯ ಸಹಕಾರದಿಂದ ನಾನು ರಾಜಕೀಯವಾಗಿ ಬೆಳೆದಿದ್ದೇನೆ. ಶ್ರೀಮಂತರೇ ಹೆಚ್ಚಿರುವ ರೆಡ್ಡಿ ಸಮಾಜದಿಂದ ನಾಲ್ಕಾರು ಕೋಟಿ ಖರ್ಚು ಮಾಡಿ ಕಲ್ಯಾಣ ಮಂಟಪ ನಿರ್ಮಿಸುವುದು ಅತಿ ಸುಲಭವಾದ ಕಾರ್ಯ. ಅದು ಮುಂದಿನ ಜಯಂತಿ ಒಳಗಾಗಿ ಮುಗಿಯಲಿದೆ ಎಂದು ಹೇಳಿದರು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮುಂದಿನ 614ನೇ ವೇಮನ ಜಯಂತಿಯನ್ನು ಇಲ್ಲಿ ಕಟ್ಟಲಿರುವ ಸುಸಜ್ಜಿತ ಹಾಗೂ ಹವಾನಿಯಂತ್ರಿತ ಕಲ್ಯಾಣ ಮಂಟಪದಲ್ಲಿ ಆಚರಿಸುವಂತಾಗಬೇಕು ಎನ್ನುವ ಬಲವಾದ ಆಶಯ ಸಮಾಜದ್ದಾಗಿದೆ. ಈ ದಿಶೆಯಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಡಾ. ಮನೋಜ ಸಾವುಕಾರ, ರುಕ್ಮಿಣಿ ಸಾವುಕಾರ, ಎಂ.ಎಂ ಮೈದೂರ, ಡಾ.ಆರ್.ಎಂ ಕುಬೇರಪ್ಪ. ಕೆಸಿಸಿ ಬ್ಯಾಂಕ್ ನಿರ್ದೇಶಕ ತಿರುಪತಿ ಅಜ್ಜನವರ ಮತ್ತಿತರರಿದ್ದರು.