ಎಸ್.ಎಸ್ ನಾರಾಯಣ ಆಸ್ಪತ್ರೆ ವೈದ್ಯರ ವಿಶೇಷ ಸಾಧನೆ
ದಾವಣಗೆರೆ,ಜ.16- ಆರ್ಬಿಟಲ್ ಅಥೆರೆಕ್ಟಮಿ ಎಂಬ ಕ್ಲಿಷ್ಟಕರ ಚಿಕಿತ್ಸೆಯನ್ನು ಇಲ್ಲಿನ ಎಸ್. ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ.
ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಆರ್.ಎಸ್. ಧನಂಜಯ ಮತ್ತವರ ತಂಡ ಈ ಚಿಕಿತ್ಸೆ ನೀಡಿದೆ.
ಇಬ್ಬರು ರೋಗಿಗಳ ಪರಿಧಮನಿಯ ಅಪಧಮನಿ ಗಳಲ್ಲಿ (coronary arteries) ಕ್ಯಾಲ್ಸಿಯಂ ಶೇಖರಣೆ ಗೊಂಡು ರಕ್ತ ಪರಿಚಲನೆ ಸುಗಮವಾಗದೇ ಹೃದಯ ಬೇನೆಯಿಂದ ಬಳಲುತ್ತಿದ್ದರು. ಇದನ್ನು ಅತ್ಯಂತ ನವೀನವಾದ ತಂತ್ರಜ್ಞಾನ ಆರ್ಬಿಟಲ್ ಅಥೆರೆಕ್ಟಮಿ ಚಿಕಿತ್ಸೆ ಮೂಲಕ ಪರಿಹರಿಸಿದ್ದಾರೆ.
ಏನಿದು ಚಿಕಿತ್ಸೆ ? ಆರ್ಬಿಟಲ್ ಅಥೆರೆಕ್ಟಮಿಯು ಆಂಜಿಯೋ ಪ್ಲಾಸ್ಟಿಗಳಿ ಗಾಗಿ ಕ್ಯಾಲ್ಸಿಯಂ ಶೇಖರಣೆಗೊಂಡ ಅಪಧಮನಿಗಳನ್ನು ಸ್ವಚ್ಛಗೊಳಿಸಲು ಉಪಯೋಗಿಸುವ ತಂತ್ರಜ್ಞಾನವಾಗಿದೆ. ಇದರಲ್ಲಿ ಉಪಯೋಗಿಸುವ ಸಾಧನ ವಜ್ರದ ತುದಿ ಹೊಂದಿದ್ದು, ಪ್ರತಿ ಸೆಕೆಂಡ್ಗೆ 80 ಸಾವಿರದಿಂದ ಲಕ್ಷದ ಇಪ್ಪತ್ತು ಸಾವಿರ ಸಾರಿ ತಿರುಗುವ ಮೂಲಕ, ಅಪಧಮನಿಗಳಲ್ಲಿ ಜಮಾವಣೆಗೊಂಡ ಕ್ಯಾಲ್ಸಿಯಂನ್ನು ತೆಗೆದುಹಾಕುತ್ತದೆ. ಇದರಿಂದ ಸ್ಟೆಂಟ್ ಹಾಕಲು ಇರುವ ಅಡೆತಡೆಗಳು ದೂರವಾಗಿ, ಸ್ಟೆಂಟ್ ಹಾಕಿದ ನಂತರ ಹೃದಯಕ್ಕೆ ರಕ್ತಸಂಚಾರ ಸರಾಗವಾಗಿ ತೊಂದರೆ ದೂರವಾಗುತ್ತದೆ.
ಸುಮಾರು 74 ಮತ್ತು 66 ವರ್ಷದ ಹಿರಿಯರಿಬ್ಬರು ತೀವ್ರದ ಹೃದಯ ಬೇನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತಪಾಸಣೆ ನಡೆಸಿದ ವೈದ್ಯರು ಇವರ ಹೃದಯದ ಪರಿಧಮನಿಯ ಅಪಧಮನಿಗಳಲ್ಲಿ ಕ್ಯಾಲ್ಸಿಯಂ ಶೇಖರಣೆಗೊಂಡು ರಕ್ತ ಸಂಚಾರಕ್ಕೆ ತೊಡಕಾಗಿತ್ತು. ಹಾಗಾಗಿ ಸುಗಮ ರಕ್ತ ಸಂಚಾರಕ್ಕೆ ಕ್ಯಾಲ್ಸಿಯಂ ಶೇಖರಣೆಯಿಂದ ಸ್ಟೆಂಟ್ ಅಳವಡಿಸುವುದು ಕ್ಲಿಷ್ಟಕರವಾಗಿತ್ತು. ಇದನ್ನು ಮನಗಂಡ ವೈದ್ಯರು ಆರ್ಬಿಟಲ್ ಅಥೆರೆಕ್ಟಮಿ ಎಂಬ ವಿನೂತನ ಮತ್ತು ಅತ್ಯಂತ ಸುಧಾರಿತ ತಂತ್ರಜ್ಞಾನದ ಮೂಲಕ ಆರ್ಟರಿಗಳಲ್ಲಿ ಶೇಖರಣೆಗೊಂಡು ಗಟ್ಟಿಯಾಗಿದ್ದ ಕ್ಯಾಲ್ಸಿಯಂ ಅನ್ನು ತೆಗೆದು ಸ್ಟೆಂಟ್ ಅಳವಡಿಸಿ ರೋಗಿಗಳ ಜೀವವನ್ನು ಕಾಪಾಡಿದ್ದಾರೆ.
ಈ ನವೀನ ತಂತ್ರಜ್ಞಾನದ ಬಗ್ಗೆ ಮಾತನಾಡಿದ ಡಾ. ಧನಂಜಯ ಆರ್ಬಿಟಲ್ ಅಥೆರೆಕ್ಟಮಿ ಎಂಬ ವಿನೂತನ ಚಿಕಿತ್ಸೆ ನಮ್ಮ ಮಧ್ಯ ಕರ್ನಾಟಕದ ಜನರಿಗೆ ಈಗ ಎಸ್ ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯವಿದೆ. ಇತ್ತೀಚೆಗೆ ನಾವು ಈ ಚಿಕಿತ್ಸೆ ಯನ್ನು ಇಬ್ಬರು ರೋಗಿಗಳಿಗೆ ನೀಡಿದ್ದೇವೆ, ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.