ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ಕಲಾ ಇತಿಹಾಸ ಬೋಧಕ ಮತ್ತು ಕಲಾ ವಿಮರ್ಷಕ ದತ್ತಾತ್ರೇಯ ಎನ್. ಭಟ್ಟ
ದಾವಣಗೆರೆ, ಜ. 14- ಪ್ರಾಚೀನ ಭಾರತೀಯರು ತಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಮಾಡುವುದರ ಹಿಂದೆ ಜೀವನೋದ್ಧಾರ, ಆತ್ಮೋನ್ನತಿ ಎಂಬ ಮಹತ್ತರ ಧ್ಯೇಯ ಹೊಂದಿದ್ದರು. ನಮ್ಮ ಪ್ರಾಚೀನರ ಪ್ರಕಾರ ಎಲ್ಲಾ ಕಲೆ, ವಾಸ್ತು ಶಿಲ್ಪಗಳ ರಚನೆಯ ಹಿಂದಿನ ಉದ್ದೇಶ ಜೀವನೋದ್ಧಾರ ಎಂಬುದಾಗಿತ್ತು ಎಂದು ದೃಶ್ಯಕಲಾ ಮಹಾವಿದ್ಯಾಲಯದ ಕಲಾ ಇತಿಹಾಸ ಬೋಧಕ ಮತ್ತು ಕಲಾ ವಿಮರ್ಷಕ ದತ್ತಾತ್ರೇಯ ಎನ್. ಭಟ್ಟ ತಿಳಿಸಿದರು.
ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅಧ್ಯಾತ್ಮಿಕ ಪರ್ವ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತೀಯ ಕಲೆ ಮತ್ತು ವಾಸ್ತು ಶಿಲ್ಪದಲ್ಲಿ ಅಧ್ಯಾತ್ಮಿಕತೆ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.
`ಯದ್ಭಾವಂ ತದ್ಭವತಿ’ ಎಂಬ ಉಕ್ತಿಯಲ್ಲಿ ದೃಢ ನಂಬಿಕೆ ಹೊಂದಿದ್ದ ಅವರು ಯಾವುದೇ ಕಲಾ ರಚನೆ ಇದ್ದಿರಬಹುದು, ವಾಸ್ತು ಶಿಲ್ಪ ನಿರ್ಮಾಣ ಇದ್ದಿರ ಬಹುದು, ಒಳ್ಳೆಯ ಮನಃಸ್ಥಿತಿ ಹೊಂದಿ ಮಾಡಬೇಕು. ಅಂದರೆ ಮಾತ್ರ ಕಾರ್ಯ ಮಾಡಿದವರಿಗೂ, ಸಮಾಜಕ್ಕೂ ಶ್ರೇಯಸ್ಸು ಉಂಟಾಗುತ್ತದೆ.
ಅಂತೆಯೇ ಭಾರತದ ಪ್ರಾಚೀನ ಕಲೆ, ವಾಸ್ತು ಶಿಲ್ಪ ಗ್ರಂಥಗಳು ದೇವತಾ ಚಿತ್ರ -ಶಿಲ್ಪ ರಚನೆ ಮಾಡುವಾಗ ಸಂಬಂಧಿಸಿದ ಕಲಾಕಾರರು ಅವರವರ ಮತಾಚಾರ-ಕುಲಾಚಾರಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾ, ತತ್ಸಂಬಂಧಿ ಅಧ್ಯಾತ್ಮಿಕ ಭೂಮಿಕೆಯನ್ನು ಅವರ ಮನೋಮಂದಿರದಲ್ಲಿ ನೆಲೆಗೊಳಿಸಿ ಕಾರ್ಯೋನ್ಮುಖರಾಗಬೇಕು ಎಂದು ನಿರ್ದೇಶಿಸಿವೆ ಎಂದರು.
ಆರಂಭದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಚಿತ್ರ ಕಲಾ ಶಿಕ್ಷಕಿ ಲಕ್ಷ್ಮಿ ಕಾಸಲ್ ಉಪನ್ಯಾಸಕಾರ ಪರಿಚಯ ಮಾಡಿಕೊಟ್ಟರು.
ಸ್ಥಳೀಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಜಯಣ್ಣ ಮಾರ್ಗದರ್ಶನದಲ್ಲಿ ಆಯೋಜನೆಯಾಗಿದ್ದ ಈ ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕ ಶಂಭುಲಿಂಗಪ್ಪ, ಪ್ರಾಚಾರ್ಯ ಮಂಜುನಾಥ್, ರಾಷ್ಟ್ರೋತ್ಥಾನ ಬಳಗದ ಹಾಲಸ್ವಾಮಿ, ಚಿತ್ರಕಲಾ ಶಿಕ್ಷಕರಾದ ಮುರಳಿ, ಮಧು, ಎಲ್ಲಾ ಗುರುವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಚಾಲಕ ಶಂಭುಲಿಂಗಪ್ಪ ಮತ್ತು ಹಾಲಸ್ವಾಮಿ ಉಪನ್ಯಾಸ ನೀಡಿದ ದತ್ತಾತ್ರೇಯ ಎನ್. ಭಟ್ಟರವರನ್ನು ಸನ್ಮಾನಿಸಿದರು.