ಮಲೇಬೆನ್ನೂರು, ಜ.14- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನಿಗೆ ಭಕ್ತರು ನೀಡಿದ ಕಾಣಿಕೆ ಹಣದಲ್ಲಿ ಹೊಸದಾಗಿ ಮಾಡಿಸಿರುವ 25 ಕೆಜಿ ತೂಕದ ಬೆಳ್ಳಿ ಮಂಟಪವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ಮಕರ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಉತ್ತರಾಯಣ ಪುಣ್ಯಕಾಲದಲ್ಲಿ ದೇವಸ್ಥಾನದ ಅಭಿಷೇಕ ಮಂದಿರದಲ್ಲಿ ನೂತನ ಬೆಳ್ಳಿ ಮಂಟಪವನ್ನು ಇಟ್ಟು ಅದರೊಳಗೆ ಅಜ್ಜಯ್ಯನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಳಿಗ್ಗೆಯೇ ಬೆಳ್ಳಿ ಮಂಟಪಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬೆಂಗಳೂರಿನಲ್ಲಿ ನಡೆಯುವ ಶ್ರೀ ಗುರು ಸಿದ್ಧರಾಮೇಶ್ವರರ ಜಯಂತ್ಯೋತ್ಸವಕ್ಕೆ ತೆರಳಿದರು.
ದೇವಸ್ಥಾನದ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್ ಸೇರಿದಂತೆ ಟ್ರಸ್ಟಿಗಳು ಹಾಗೂ ಗ್ರಾಮಸ್ಥರು ಮತ್ತು ಭಕ್ತಾದಿಗಳು ಈ ವೇಳೆ ಹಾಜರಿದ್ದರು.
ಅಪಾರ ಭಕ್ತರು : ಮಕರ ಸಂಕ್ರಾಂತಿ ಪ್ರಯುಕ್ತ ಮಂಗಳವಾರ ಉಕ್ಕಡಗಾತ್ರಿಗೆ ಸಾವಿರಾರು ಭಕ್ತರು ಆಗಮಿಸಿ, ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಬಳಿಕ ಅಜ್ಜಯ್ಯನ ಗದ್ದಿಗೆ ದರ್ಶನ ಪಡೆದರು. ನಂತರ ನದಿ ದಂಡೆ ಹಾಗೂ ನಡುಗಡ್ಡೆಯಲ್ಲಿ ಕುಟುಂಬದವರು ಹಾಗೂ ಸ್ನೇಹಿತರು ಸೇರಿ ಸಂಕ್ರಾಂತಿ ಹಬ್ಬದ ವಿಶೇಷ ರೊಟ್ಟಿ – ಬುತ್ತಿ ಊಟ ಮಾಡಿ ಸಂಭ್ರಮಿಸಿದರು.