ಎಸ್‌ಜೆವಿಪಿ ಕಾಲೇಜಿನ ಕಾರ್ಯಕ್ರಮದಲ್ಲಿ ಶ್ರೀ ಉಜ್ಜಯಿನಿ ಜಗದ್ಗುರುಗಳು
ಹರಿಹರ, ಜ. 11 – ನಾವು ಗಳಿಸಿದ ಆಸ್ತಿ, ಅಧಿಕಾರ, ಸಂಪತ್ತು, ಸಂಪಾದನೆ ಒಂದು ದಿನ ನಮ್ಮಿಂದ ದೂರವಾಗಬಹುದು, ಆದರೆ ನಾವು ಕಲಿತಂತಹ ವಿದ್ಯೆ ಮಾತ್ರ ನಮ್ಮ ಜೊತೆಗೆ ಬರು ವಂತಹದ್ದು ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟರು.
ನಗರದ ಎಸ್.ಜೆ.ವಿ.ಪಿ ಕಾಲೇಜು ಸಭಾಂಗಣ ದಲ್ಲಿ ನಡೆದ ಎಂ.ಆರ್.ಬಿ ಪ್ರೌಢಶಾಲೆಯ 1992-93 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗಳಿಸಿದ ಹಣ, ಆಸ್ತಿ, ಸಂಪತ್ತಿಗೆ ಕಳ್ಳ ಕಾಕರ ಭಯ ಕಾಣುತ್ತಿದ್ದೆವು. ಆದರೆ ಕಾಲ ಬದಲಾದಂತೆ ಈಗ ಇಡಿ ಮತ್ತು ಐಟಿ ಅಧಿಕಾರಿಗಳ ಭಯ ಕಾಣುತ್ತೇವೆ. ಆದರೆ ಕಲಿತಂತಹ ವಿದ್ಯೆಗೆ ಯಾವುದೇ ರೀತಿಯ ಭಯ ಇರುವುದಿಲ್ಲ ಮತ್ತು ಅದನ್ನು ಅಪಹರಣ ಮಾಡಲಿಕ್ಕೂ ಸಹ ಸಾಧ್ಯವಿಲ್ಲ. ಹಣದ ಮೂಟೆಯನ್ನು ಹೊತ್ತುಕೊಂಡು ಹೋಗುವ ಸಮಯದಲ್ಲಿ ದೂರ ಹೋದಂತೆ ಭಾರ ಆಗುತ್ತದೆ. ಆದರೆ ವಿದ್ಯೆ ಕಲಿತಂತೆಲ್ಲ ಭಾರ ಆಗದೇ ನಮ್ಮನ್ನು ಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಹೋಗುವಂತಹ ಶಕ್ತಿಯನ್ನು ಹೊಂದಿದೆ ಎಂದರು.
ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾಡುವುದಷ್ಟೇ ಅಲ್ಲದೆ ಅವರಲ್ಲಿ ಇರುವಂತಹ ಪ್ರತಿಭೆಯನ್ನು ಹೆಕ್ಕಿ ಹೊರ ತೆಗೆಯಬೇಕು. ಜಗತ್ತಿನಲ್ಲಿ ಜ್ಞಾನ ಸಂಪತ್ತು ಬಹಳ ದೊಡ್ಡದು, ಅನ್ನದಿಂದ ಶರೀರದ ಆಕಾರ ದೊಡ್ಡದಾಗುತ್ತದೆ. ಆದರೆ ವಿದ್ಯೆಯಿಂದ ಬುದ್ಧಿಯ ವಿಕಾಸ ಆಗುತ್ತದೆ. ತಂದೆ, ತಾಯಿ ತಮ್ಮ ಮಕ್ಕಳಿಗೆ ಜನ್ಮ ನೀಡಿ ಅನ್ನವನ್ನು ಹಾಕಬಹುದು. ಆದರೆ ಸಾರ್ಥಕತೆಯ ಬದುಕಿಗೆ ಬೇಕಾದಂತಹ ಎಲ್ಲಾ ಅಗತ್ಯತೆಗಳನ್ನು ಪೂರೈಸುವಂತಹ ವಿದ್ಯೆ, ಬುದ್ಧಿ ಯನ್ನು ಶಿಕ್ಷಕರು ನೀಡುತ್ತಾರೆ. ಹಾಗಾಗಿ ಅವರನ್ನು ಇಲ್ಲಿ ಸನ್ಮಾನಿಸಿ, ಗೌರವಿಸಿದ್ದು ಶ್ಲ್ಯಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಎಸ್.ಜೆ.ವಿ.ಪಿ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ ಮಾತನಾಡಿ, ಈ ಕಾಲೇಜಿನಲ್ಲಿ ಓದಿರುವಂತಹ ಹಳೆಯ ವಿದ್ಯಾರ್ಥಿಗಳು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವಂತಹ ಕೆಲಸವನ್ನು ಮಾಡಿದ್ದು ಶ್ಲ್ಯಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ನಿವೃತ್ತ ಮುಖ್ಯೋಪಾಧ್ಯಾಯ ಜಿ.ಎಸ್. ಹಿರೇಮಠ್, ನಿವೃತ್ತ ಶಿಕ್ಷಕರಾದ ಎನ್.ಎ. ಹಿರೇಮಠ್, ಎನ್. ಗಂಗಾಧರ್, ಪಿ.ಕೆ. ಎಸ್.ಬಿ. ಹಿರೇಮಠ್, ಅನಸೂಯಮ್ಮ, ಹೆಚ್.ಕೊಟ್ರೇಶಪ್ಪ, ಟಿ.ಕೆ. ಪ್ರಭುಸ್ವಾಮಿ, ಎಸ್.ಟಿ. ಹಿರೇಮಠ್, ಎನ್.ಎಂ.ಕೆ. ರಾಜು ಹಾಗೂ ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ ಮತ್ತಿತರರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಮತ್ತು ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಆರ್.ಟಿ. ಪ್ರಶಾಂತ್, ಸುರೇಶ್ ಸಕ್ರಿ, ಜೆ.ಎಂ. ನಾಗರಾಜ್, ಕರಿಬಸಪ್ಪ, ಉಮೇಶ್, ಸುಧೀರ್, ರೇಣುಕಮ್ಮ ಎನ್.ಎ., ಶಿಲ್ಪಾ ಕಾರಿಗನೂರು, ಪ್ರವೀಣ್ ಪಾಲಂಕರ್, ಷಣ್ಮುಖ, ಗುತ್ಯಪ್ಪ, ರಮೇಶ್, ರಾಜು, ಅತಾವುಲ್ಲಾ, ಅಬ್ದುಲ್ ರಹೀಂ, ಕೊಟ್ರೇಶ್ ದೀಟೂರು, ಶಿವಕುಮಾರ್ ಕಾಗದವರ್ ಮತ್ತಿತರರು ಹಾಜರಿದ್ದರು.