ಜಿಲ್ಲೆಯಲ್ಲಿ ಉರ್ದು ಶಾಲೆಗಳು ಕುಂಠಿತ : ಎಂ.ಎಲ್ಸಿ ಜಬ್ಬಾರ್‌ ಕಳವಳ

ಜಿಲ್ಲೆಯಲ್ಲಿ ಉರ್ದು ಶಾಲೆಗಳು ಕುಂಠಿತ : ಎಂ.ಎಲ್ಸಿ ಜಬ್ಬಾರ್‌ ಕಳವಳ

ದಾವಣಗೆರೆ, ಜ. 12- ಜಿಲ್ಲೆಯಲ್ಲಿನ ಉರ್ದು ಶಾಲೆಗಳು ಕುಂಠಿತಗೊಂಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅವರು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಗೋಲ್ಡನ್ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿದ್ದ ಮುಷಾ ಇರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದ ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಬಹಳ ಕಷ್ಟ. ನೂತನವಾಗಿ ಶಾಲೆಗಳನ್ನು ತೆರೆದು ಶಿಕ್ಷಣ ನೀಡುವ ಬದಲು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವದ್ಧಿಪಡಿಸಿದರೆ ಉರ್ದು ಭಾಷೆ ಬೆಳವಣಿಗೆಗೆ ಮಾರ್ಗವಾಗುತ್ತದೆ ಎಂದು ಕರೆ ನೀಡಿದರು.

ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮಹಮ್ಮದ್ ಅಲಿ ಅವರು ಮಾತನಾಡಿ, ಈ ಹಿಂದಿನ ಸರ್ಕಾರಗಳು ಉರ್ದು ಅಕಾಡೆಮಿಗೆ ಕಡಿಮೆ ಅನುದಾನ ನೀಡುತ್ತಿದ್ದರು. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ 1.50 ಕೋಟಿ ರೂ.ಗಳ ಅನುದಾನ ನೀಡಲು ಮುಂದಾಗಿದ್ದಾರೆ. ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಅವರು ಉರ್ದು ಭಾಷೆ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ 10 ಕೋಟಿ ರೂ.ಗಳ ಪ್ರಸ್ತಾವನೆ ಇಟ್ಟಿದ್ದಾರೆ ಎಂದು ಹೇಳಿದರು.

ಪಾಲಿಕೆ ಮಹಾಪೌರರಾದ ಕೆ. ಚಮನ್ ಸಾಬ್ ಮಾತನಾಡಿ ಅಧಿಕಾರ ಶಾಶ್ವತ ಅಲ್ಲ, ಸಮಯಕ್ಕೆ ಅನುಗುಣವಾಗಿ ಬರುತ್ತದೆ, ಹೋಗುತ್ತದೆ. ಆದರೆ, ಈ ನಡುವೆ ನಾವುಗಳು ಮಾಡುವ ಸೇವೆಗಳೇ ಶಾಶ್ವತ ಎಂದು ಹೇಳಿ ನಾನು ಅಧ್ಯಕ್ಷನಾದ ಮೇಲೆ ಸಮಾಜದ ಚಿಂತನೆಯನ್ನಿಟ್ಟುಕೊಂಡು ಮಾಡಿದಂತಹ ಸೇವೆ ನಮಗೆ ತೃಪ್ತಿ ನೀಡಿದೆ ಎಂದು ವಿವರಿಸಿದ ಅವರು ಮನುಷ್ಯ ಗುರಿಯನ್ನು ತಲುಪಲು ಪ್ರಯತ್ನ ಬಹಳ ಅವಶ್ಯ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಗುಜರಾತ್‌ನ ಆಹಮ್ಮದ್ ನಗರ, ಜಬಲ್ಪುರ್‌ನಿಂದ ಕವಿಗಳು ಪಾಲ್ಗೊಂಡಿದ್ದರು. ಟಾರ್ಗೆಟ್ ಮಹಮ್ಮದ್ ಅಸ್ಲಂ ಅವರಿಗೆ ಗೌರವಿಸಿ, ಪುರಸ್ಕರಿಸಲಾಯಿತು.

ವಕ್ಫ್‌ ಬೋರ್ಡ್‌ ಅಧ್ಯಕ್ಷ ಸಿರಾಜ್ ಆಹ್ಮದ್, ಅಬ್ದುಲ್ ಘನಿ ಅಕಾಡೆಮಿ ಮಾಜಿ ಅಧ್ಯಕ್ಷರು ವೇದಿಕೆಯಲ್ಲಿದ್ದರು. 

ಆರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅಕಾಡೆಮಿ ಸದಸ್ಯ ದಾವೂದ್ ಮೊಹಸೀನ್ ಅವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅಹಮ್ಮದ್ ಷರೀಫ್ ಎಂಬುವವರು ವಾಗ್ವಾದ ಮಾಡಿದಾಗ ಕೊಂಚಕ್ಷಣ ಸಭಿಕರು ದಿಗ್ಭ್ರಮೆಗೊಂಡರು. ನಂತರ ಅಕಾಡೆಮಿ ಅಧ್ಯಕ್ಷರು ಸಮಜಾಯಿಷಿ ಉತ್ತರ ನೀಡಿ ಸ್ಥಿತಿಯನ್ನು ತಹಬಂದಿಗೆ ತಂದರು.

error: Content is protected !!