ದಾವಣಗೆರೆ, ಜ.12- ಇಲ್ಲಿನ ಗ್ರಾಮಾಂತರ ವ್ಯಾಪ್ತಿಯಲ್ಲಿನ ವಡ್ಡನಹಳ್ಳಿ ಅಂಗವಿಕಲರ ತರಬೇತಿ ಕೇಂದ್ರದಲ್ಲಿ ಕೂಡಲೇ ಕನ್ನಡ ಶಿಕ್ಷಕರನ್ನು ನೇಮಕಗೊಳಿಸಬೇಕು ಮತ್ತು ಕೇಂದ್ರದಲ್ಲಿ ಎಲ್ಲರೂ ಕನ್ನಡ ಬಳಕೆ ಮಾಡಲೇ ಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಈ ತರಬೇತಿ ಕೇಂದ್ರದಲ್ಲಿ ಉತ್ತರ ಭಾರತೀಯರು ಮತ್ತು ತಮಿಳುನಾಡಿನಿಂದ ಬಂದಂತಹ ಶಿಕ್ಷಕರೇ ಇದ್ದು, ನಾಡಿನ ವಿಕಲಚೇತನ ಮಕ್ಕಳಿಗೆ ಕನ್ನಡ ಬೋಧಿಸುವ ಶಿಕ್ಷಕರು ಇಲ್ಲದಂತಾಗಿದೆ. ಇಲ್ಲಿ ನಡೆಯುವ ಪ್ರತಿ ಕಾರ್ಯ ಕ್ರಮದಲ್ಲೂ ಕನ್ನಡ ಭಾಷೆ ಬಳಸದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಕರವೇ ಕಿಡಿ ಕಾರಿದೆ.
ಈ ಕುರಿತು ವಿಕಲಚೇತನ ಮತ್ತು ಅಂದ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಕೇಳಿದರೆ, ಈಗಾಗಲೇ ನಾವು ಅನೇಕ ಬಾರಿ ಈ ಬಗ್ಗೆ ಮಾಹಿತಿಯನ್ನು ತಿಳಿಸಿದ್ದೇವೆ. ಆದರೆ ಅದು ಕೇಂದ್ರ ಸರ್ಕಾರಕ್ಕೆ ಒಳಪಡುವುದರಿಂದ ನಮ್ಮ ಅಧೀನದಲ್ಲಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳ ಮಾತನ್ನು ಒಪ್ಪದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಕೇಂದ್ರ ಸರ್ಕಾರಕ್ಕೆ ಒಳಪಟ್ಟ ಇಲಾಖೆಗಳು ಯಾವುದೇ ಇರಲಿ, ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಅನುಸರಿಬೇಕು. ಇಲ್ಲದಿದ್ದಲ್ಲಿ ಅಂತಹ ಕಚೇರಿಗಳಿಗೆ ಕರವೇ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಯಾವ ಇಲಾಖೆ ಅಥವಾ ಪರಭಾಷಿಗರೆ ಬರಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ಇಲ್ಲವಾದರೆ ಅಂತವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಕ್ಕ ಪಾಠ ಕಲಿಸಲಿದೆ ಎಂದು ಕರವೇ ತಿಳಿಸಿದೆ.