ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್
ದಾವಣಗೆರೆ, ಜ.12- ಇಂದಿನ ಒತ್ತಡದ ಬದುಕಿನಲ್ಲಿ ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು ಎಂದು ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ತಿಳಿಸಿದರು.
ನಗರದ ಪಿ.ಜೆ. ಬಡಾವಣೆಯ ಸರ್.ಎಂ. ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಭಾನುವಾರ ಮಕರ ಸಂಕ್ರಾಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ್ಯ ಆಯೋಜಿಸಿದ್ದ ಉಚಿತ ಯೋಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಸದಾ ಚಟುವಟಿಕೆಯಿಂದ ಇದ್ದರೆ, ನಕಾ ರಾತ್ಮಕ ಚಿಂತನೆ ಹಾಗೂ ಭಾವನೆಗಳಿಂದ ದೂರವಿರ ಬಹುದು. ಆರೋಗ್ಯ ಸಮೃದ್ಧಿಗೆ ಯೋಗ ಸಹಕಾರಿ ಎಂದು ಹೇಳಿದರು. ಸದಾ ಉತ್ತಮ ಚಿಂತನೆ ಮಾಡಬೇಕು. ಪ್ರತಿ ದಿನ ಸೂರ್ಯೋದಯಕ್ಕೂ ಮುನ್ನವೇ ಏಳುವ ಹವ್ಯಾಸ ರೂಢಿಸಿಕೊಂಡರೆ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಯೋಗ ವಿದ್ಯಾರ್ಥಿಗಳಾದ ವಿ.ಕೆ. ರಾಹುಲ್, ಎಸ್. ಸಂವೇದಿತಾ, ಕಾವ್ಯ, ಚೇತನ್ ಇತರರು ಸೂರ್ಯ ನಮಸ್ಕಾರ ಯೋಗ ಪದ್ಧತಿಯನ್ನು ಪ್ರದರ್ಶಿಸಿದರು. ಪ್ರಾರಂಭದಲ್ಲಿ ವಿಶ್ವಶಾಂತಿ ಹಾಗೂ ಆರೋಗ್ಯ ಸಮೃದ್ಧಿಗಾಗಿ ಅಗ್ನಿಹೋತ್ರ ಹೋಮ ಮಾಡಲಾಯಿತು.
ಈ ವೇಳೆ ಔಷಧಿ ವ್ಯಾಪಾರಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಪಿ. ಪ್ರಸನ್ನ ಆಚಾರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸಚಿನ್ ವೆರ್ಣೇಕರ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಎನ್. ಪ್ರಕಾಶ್, ಯೋಗ ಶಿಕ್ಷಕ ವಿ. ಲಲಿತ್ ಕುಮಾರ್ ಜೈನ್ ಇದ್ದರು.