ಮಲೇಬೆನ್ನೂರು, ಜ.12- ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 14 ರ ಮಂಗಳವಾರ ಮಕರ ಸಂಕ್ರಾಂತಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಈ ವರ್ಷವೂ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಬಿ.ಚಿದಾನಂದಪ್ಪ ತಿಳಿಸಿದರು.
ಗುರುವಾರ ದೇವಸ್ಥಾನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 14ರ ಮಂಗಳವಾರ ಪ್ರಾತಃ ಕಾಲದಲ್ಲಿ ಎಲ್ಲಾ ದೇವರುಗಳಿಗೆ ಅಭಿಷೇಕ, ಬೆಳಿಗ್ಗೆ 8 ರಿಂದ 10.30 ರವರೆಗೆ ಆದಿತ್ಯ ಸೂರ್ಯನಾರಾಯಣ ಹೋಮ ಪೂರ್ಣಾವತಿ ನಡೆಯಲಿದೆ ಎಂದರು.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮದ ಶಿಷ್ಯರಿಂದ ಸತ್ಸಂಗ ಕಾರ್ಯಕ್ರಮ ಇರುತ್ತದೆ.
ಅಂದು ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆವರೆಗೆ ಸಂಕ್ರಾಂತಿ ಹಬ್ಬದ ವಿಶೇಷ ಪ್ರಸಾದಗಳ ಅನ್ನ ಸಂತರ್ಪಣೆ ಏರ್ಪಡಿಸಲಾಗಿದ್ದು, ಸುಮಾರು 15 ರಿಂದ 20 ಸಾವಿರ ಜನ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿ.ಚಿದಾನಂದಪ್ಪ ಮಾಹಿತಿ ನೀಡಿದರು.
ಬೃಹತ್ ಆರೋಗ್ಯ ಮೇಳ, ರಕ್ತದಾನ ಶಿಬಿರ : ಇದೇ ದಿನಾಂಕ 14ರ ಸಂಕ್ರಾಂತಿ ಹಬ್ಬದ ದಿನದಂದು ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮಲೇಬೆನ್ನೂರು ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ವಲಯಾಧ್ಯಕ್ಷ ಚಿಟ್ಟಕ್ಕಿ ನಾಗರಾಜ್ ತಿಳಿಸಿದರು.
ಮಲೇಬೆನ್ನೂರಿನ ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಹಾಗೂ ಕಡ್ಲಿ ಐವಿಎಫ್ ಸೆಂಟರ್ (ದಾವಣಗೆರೆ) ಮತ್ತು ಕೃಷ್ಣ ಹೆಲ್ತ್ಕೇರ್, ಡಯಾಗ್ನೋಸ್ಟಿಕ್ ಸೆಂಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಆರೋಗ್ಯ ಮೇಳ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರಗಳನ್ನು ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಏರ್ಪಡಿಸಲಾಗಿದೆ.
ಇದೇ ವೇಳೆ ಲಯನ್ಸ್ ಜಿಲ್ಲೆಗೆ ಹೊಸದಾಗಿ ಖರೀದಿಸಿರುವ ರಕ್ತ ನಿಧಿ ಕೇಂದ್ರದ ಅಂಬ್ಯುಲೆನ್ಸ್ ವಾಹನವನ್ನು ಲೋಕಾರ್ಪಣೆ ಮಾಡಲಾಗುವುದೆಂದು ಡಾ. ಟಿ.ಬಸವರಾಜ್, ಓ.ಜಿ.ರುದ್ರಗೌಡ್ರು ತಿಳಿಸಿದರು.
ದೇವಸ್ಥಾನ ಟ್ರಸ್ಟ್ನ ಬಿ.ಪಂಚಪ್ಪ, ಬಿ.ನಾಗೇಂದ್ರಪ್ಪ, ಬಿ.ವಿ.ರುದ್ರೇಶ್, ಬಿ.ಉಮಾಶಂಕರ್, ಬಿ.ಶಂಭುಲಿಂಗಪ್ಪ, ಬಿ.ಮಲ್ಲಿಕಾರ್ಜುನ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಪಾರ್ವತಮ್ಮ ಇ.ಎಂ.ಮರುಳಸಿದ್ದೇಶ್, ಕಾರ್ಯದರ್ಶಿ ರೂಪಾ ಪಾಟೀಲ್, ಎನ್.ಜಿ.ಬಸವನಗೌಡ್ರು, ಡಾ. ಹೆಚ್.ಜೆ.ಚಂದ್ರಕಾಂತ್, ಸಿರಿಗೆರೆ ಸಿದ್ದಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.