ಮಕ್ಕಳು ವಿದ್ಯೆಯ ಜೊತೆ ಸಂಸ್ಕಾರ ರೂಢಿಸಿಕೊಂಡರೆ ಶಿಕ್ಷಣ ಪರಿಪೂರ್ಣ

ಮಕ್ಕಳು ವಿದ್ಯೆಯ ಜೊತೆ ಸಂಸ್ಕಾರ ರೂಢಿಸಿಕೊಂಡರೆ ಶಿಕ್ಷಣ ಪರಿಪೂರ್ಣ

ದಾವಣಗೆರೆ, ಜ. 12- ವಿದ್ಯಾರ್ಥಿಗಳು ಕೇವಲ ಅಂಕ ಪಟ್ಟಿಗೆ ಸೀಮಿತವಾಗದೇ ವಿದ್ಯಾಭ್ಯಾಸದ ಜತೆಯಲ್ಲಿ ನಮ್ಮ ನಾಡು-ನುಡಿಯ ಬಗ್ಗೆ ಕಾಳಜಿ ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಂಡರೆ ಶಿಕ್ಷಣಕ್ಕೆ ಪರಿಪೂರ್ಣತೆ ಬರುತ್ತದೆ. ಈ ಕೇರಳ ಗಡಿನಾಡಲ್ಲಿ ಹಳೆಗನ್ನಡ ಕವನ ರಚನೆಯ ಕಮ್ಮಟ ಹಮ್ಮಿಕೊಂಡ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಮಕ್ಕಳಲ್ಲಿ ಸಾಹಿತ್ಯದ ಪರಿಜ್ಞಾನ ಕನ್ನಡ ಭಾಷೆ ಮೂಡಿಸುತ್ತಿರುವುದು ಶ್ಲ್ಯಾಘನೀಯ ಎಂದು ಕೇರಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತಮ್ಮ ಮನದಾಳದ ಮಾತು ಹಂಚಿಕೊಂಡರು.

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ಆಶ್ರಯದಲ್ಲಿ ಇತ್ತೀಚೆಗೆ ಕಾಸರಗೋಡು ಜಿಲ್ಲೆಯ ಮೀಯಪದವು ವಿ.ಎ.ಯು.ಪಿ.ಎಸ್. ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ 3ನೇ ವರ್ಷದ ವಾರ್ಷಿಕೋತ್ಸವ ಮತ್ತು ಕವನ ರಚನಾ ಕಮ್ಮಟ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.

ವಿ.ಎ.ಯು.ಪಿ.ಎಸ್. ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಶ್ರೀಧರ್‍ರಾವ್, ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್, ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ, ನಿವೃತ್ತ ಪ್ರಾಚಾರ್ಯ ಪಿ.ಎನ್.ಮುಡತ್ತಾಯ, ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷ ವಿ.ಬಿ.ಕುಳಮರ್ವ, ಕವಿಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಲಕ್ಷ್ಮೀ ವಿ.ಭಟ್ ಮುಂತಾದವರು ಮಾತನಾಡಿದರು.

ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಉಪಸ್ಥಿತರಿದ್ದರು. ಕು. ಸಾನಿಧ್ಯ ಮತ್ತು ಸಿಂಚನ ಪ್ರಾರ್ಥಿಸಿದರು. ಶ್ರೀಮತಿ ಜಯಲಕ್ಷ್ಮಿ ಕಾರಂತ್ ಸ್ವಾಗತಿಸಿದರು. ಶ್ರೀಮತಿ ಜಯಲಕ್ಷ್ಮಿ ರಾಮಚಂದ್ರ ಹೊಳ್ಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

error: Content is protected !!