ದಾವಣಗೆರೆ, ಜ. 12 – ಹೂಳು ತುಂಬಿದ್ದ ಹೊಂಡವನ್ನು ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆಂಗಾಪುರ ಗ್ರಾಮಸ್ಥರು ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ‘ನಮ್ಮೂರ ನಮ್ಮ ಕೆರೆ’ ಯೋಜನೆಯಡಿ ಹೊಂಡದ ಜೀರ್ಣೋದ್ಧಾರಕ್ಕೆ ಆಯ್ಕೆಯಾಗಿದ್ದು, ಸಂಸ್ಥೆಯಿಂದ ಎಸ್ಟಿಮೇಟ್ ತಯಾರಿಸುತ್ತಿದ್ದಾರೆ. ಅದರ ಪೂರ್ವದಲ್ಲಿ ಗ್ರಾಮಸ್ಥರು ಹೂಳೆತ್ತಲು ಚಾಲನೆ ನೀಡಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್. ಬಸವಂತಪ್ಪ, ಹೊಂಡದ ಹೂಳೆತ್ತುವ ಕಾಮ ಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಅನು ದಾನ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಕೂಡಲೇ ಶಾಸಕರು, ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ, ಹೊಂಡ ಹೂಳೆತ್ತುವ ಕಾಮಗಾರಿಗೆ ಅನುದಾನ ಒದಗಿಸಿ, ಹೊಂಡದ ಸುತ್ತ ತಡೆಗೋಡೆ ನಿರ್ಮಿಸಿ ತಂತಿ ಬೇಲಿ ಹಾಕುವಂತೆ ಸೂಚನೆ ನೀಡಿದರು. ಅಲ್ಲದೇ ತಾವು ಕೂಡ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಹೊಂಡ ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸಿ ಹದ್ದುಬಸ್ತ್ ಮಾಡುವಂತೆ ತಹಶೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗಣ್ಣ, ಗ್ರಾ.ಪಂ. ಸದಸ್ಯ ಪರಮೇಶ್ವರಪ್ಪ, ಜಯಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗಣೇಶ್ ನಾಯ್ಕ್, ಮಂಜಣ್ಣ, ಪರಸಪ್ಪ, ಅಣ್ಣಪ್ಪ, ಮುರುಘ ರಾಜೇಂದ್ರಪ್ಪ ಹಾಗೂ ಗ್ರಾಮಸ್ಥರು ಇದ್ದರು.