ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ
ದಾವಣಗೆರೆ, ಜ. 12- ಕನ್ನಡ ಭಾಷೆಗೆ ಸಾವಿಲ್ಲ. ನಾವು ಕನ್ನಡ ನುಡಿಯನ್ನು ನಿರಂತರವಾಗಿ ಬಳಸುವ ಮೂಲಕ ತಾಯಿ ನುಡಿ ಯನ್ನು ಸಂರಕ್ಷಿಸೋಣ ಎಂದು ಡಾ. ಹೆಚ್.ಎಸ್.ಮಂಜುನಾಥ ಕುರ್ಕಿ ಹೇಳಿದರು.
ಅವರು ನಗರದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಾಹಿತ್ಯದ ವೇದಿಕೆಯಿಂದ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಮಾತೃವಾತ್ಸಲ್ಯ ಕವನ ಸಂಕಲನ ಬಿಡುಗಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ತಂದೆಯಂತೆ ಹೀರೋ, ತಾಯಿಯಂತಹ ದೇವರನ್ನು ನಾವು ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ತಾಯಿಯ ಕರುಳಬಳ್ಳಿ, ತಾಯಿಯ ತುತ್ತು, ಮುತ್ತು, ಅವಳು ಕಲಿಸಿ ಮಾತು, ಸಂಸ್ಕೃತಿ, ಪ್ರೀತಿ-ವಾತ್ಸಲ್ಯಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಲೇಖಕ ಸುಮತೀಂದ್ರ ಅವರಿಂದ ರಚಿತವಾದ ಮಾತೃವಾತ್ಸಲ್ಯ ಕವನ ಸಂಕಲನವನ್ನು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ್ ಗುಂಡಗಟ್ಟಿ ಬಿಡುಗಡೆ ಮಾಡಿದರು. ಅತಿಥಿಗಳಾಗಿ ಕವಯತ್ರಿ ಶ್ರೀಮತಿ ಸಂಧ್ಯಾ ಸುರೇಶ್ ಉಪಸ್ಥಿತರಿದ್ದು ಮಾತನಾಡಿದರು. ಸಾಹಿತಿ ಆರ್.ಆರ್. ಇನಾಂದಾರ್ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕ ಸುಮತೀಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಗಿರಿಜಾ ಸಿದ್ದಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.