ರಸಮಂಜರಿ ಕಾರ್ಯಕ್ರಮದಲ್ಲಿ ಗುಂಡಿ ಪುಷ್ಪ ಸಿದ್ದೇಶ್
ದಾವಣಗೆರೆ, ಜ. 8 – ಮನುಷ್ಯನ ಜೀವನದಲ್ಲಿ ರಂಜನೆ ಬಹಳ ಅವಶ್ಶ, ಜಂಜಾಟದ ಜೀವನದಲ್ಲಿ ಮನಸ್ಸಿಗೆ ಉಲ್ಲಾಸ ದೊರೆಯುವುದು ಸಂಗೀತದಿಂದ ಮಾತ್ರ ಸಾಧ್ಯ ಎಂದು ಸಮಾಜ ಸೇವಕರಾದ ಶ್ರೀಮತಿ ಪುಷ್ಪಾ ಗುಂಡಿ ಸಿದ್ದೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿಯ ಶಾಂತಿ ಕಂಫರ್ಟ್ ಸಭಾಂಗಣದಲ್ಲಿ ಎವರ್ ಗ್ರೀನ್ ಮೇಲೋಡಿ ಫ್ರೆಂಡ್ಸ್ ಆಶ್ರಯದಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಖ್ಯಾತ ಹಿನ್ನೆಲೆ ಗಾಯಕ ದಿ. ಮಹಮ್ಮದ್ ರಫೀ ಅವರ ನೂರು ವರ್ಷದ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಗರದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ, ಅವರಿಗೆಲ್ಲ ಒಂದು ವೇದಿಕೆಯನ್ನು ನಿರ್ಮಿಸಿ ಪ್ರತಿಭೆಯ ಪ್ರದರ್ಶನದ ಅವಶ್ಯಕತೆ ಇದೆ ಮುಂದಿನ ದಿನಗಳಲ್ಲಿ ಅಂಥಹ ಯೋಜನೆಯನ್ನು ರೂಪಿಸುವಲ್ಲಿ ನಾವೆಲ್ಲರೂ ಮುಂದಾಗೋಣ ಎಂದು ಕಲಾವಿದರಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪತ್ರಕರ್ತ ಬಿ. ಸಿಕಂದರ್ ಅವರು ಮಾತನಾಡಿ, ಸಂಗೀತ ಲೋಕದಲ್ಲಿ ಅನೇಕ ಗಾಯಕರು ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಆದರೆ ಮಹಮ್ಮದ್ ರಫೀ ಅವರು ವಿಶಿಷ್ಠ ರೂಪದಲ್ಲಿ ಕಲಾವಿದರಿಗೆ (ಶಮ್ಮಿ ಕಪೂರ್, ಸುನೀಲ್ ದತ್) ತಕ್ಕಂತೆ ಧ್ವನಿಗೂಡಿಸಿ ಹಾಡಿರುವ ಗೀತೆಗಳು ಇಂದಿಗೂ ಸಂಗೀತ ಪ್ರೇಮಿಗಳ ಹೃದಯದಲ್ಲಿ ಅಚ್ಚು ಉಳಿದಿದೆ ಎಂದರು.
ಹೈದ್ರಾಬಾದಿನ ಕಲಾವಿದೆ ಮಂದಾಕಿನಿ ಅವರೊಂದಿಗೆ ಸ್ಥಳೀಯ ಕಲಾವಿದರಾದ ಡಾ. ಅನೀಸ್, ಕೆ.ಜಿ. ನಾಸೀರ್, ಸಿಂಗರ್ ಅಲಿ, ಇಕ್ಬಾಲ್ ಸಾಬ್, ಎ.ಬಿ. ಜಬೀ, ಚಮನ್, ಅವರುಗಳು ಹಳೆ ಹಾಗೂ ಹೊಸ ಗೀತೆಗಳನ್ನು ಹಾಡಿ ಸಭಿಕರಿಗೆ ರಂಜಿಸಿದರು.