ದಾವಣಗೆರೆ ಜ.8- ಹರಿಯಾಣದ ಶಂಭು ಗಡಿ ಯಲ್ಲಿ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಒತ್ತಾಯಗಳನ್ನು ತಕ್ಷಣವೇ ಸರ್ಕಾರ ಪರಿಹರಿಸಿ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಜಗತ್ ಸಿಂಗ್ ದಲ್ಲೈವಾಲಾರವರ ಪ್ರಾಣ ಉಳಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಉಪಾಧ್ಯಕ್ಷ ಹೊನ್ನೂರ್ ಮುನಿಯಪ್ಪ ಮಾತನಾಡಿ, ಹರಿಯಾಣದ ಶಂಭು ಗಡಿಯಲ್ಲಿ ರೈತರು ನಡೆಸುತ್ತಿರುವ ಚಳವಳಿ ಅವರಿಗೆ ಮಾತ್ರ ಸೀಮಿತವಲ್ಲ, ಭಾರತ ದೇಶದ ಎಲ್ಲಾ ರೈತರ ಪರವಾಗಿ ನಡೆಯುತ್ತಿರುವ ಚಳವಳಿ. 3 ವರ್ಷದ ಹಿಂದೆ ದೆಹಲಿಯಲ್ಲಿ 13 ತಿಂಗಳ ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿತ್ತು ಎಂದರು.
ಈ ಚಳವಳಿಯ ಮುಖಂಡರಾದ ಜಗತ್ ಸಿಂಗ್ ದಲ್ಲೈವಾಲಾ ಅವರು ಸಹ ಈ ದೇಶದ ರೈತರ ಪರವಾಗಿ ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿ ಅಹಿಂಸಾತ್ಮಕ ಮಾರ್ಗದಲ್ಲಿ ಚಳವಳಿ ನಡೆಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ರೈತ ಚಳವಳಿಯನ್ನು ದೇಶಾದ್ಯಂತ ತೀವ್ರಗೊಳಿಸಲಾಗುವು ದೆಂದು ಎಚ್ಚರಿಸಿ, ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪಿ.ಪಿ. ಮರುಳಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಗೋಶಾಲೆ ಬಸವರಾಜ್, ಸಂಘಟನಾ ಕಾರ್ಯದರ್ಶಿ ನೀತಿಗೆರೆ ಗಣೇಶ್, ಜಿಲ್ಲಾ ಹಸಿರು ಸೇನೆ ಸಂಚಾಲಕ ಅಭಿಲಾಷ ಎಂ, ಮಲ್ಲೇನಹಳ್ಳಿ ನಾಗರಾಜ್, ಮಾಯಕೊಂಡ ಬೀರಪ್ಪ, ಕ್ಯಾತನಹಳ್ಳಿ ನಾಗರಾಜಪ್ಪ, ಕೋಡಿಕೊಪ್ಪ ಶಿವಪ್ಪ, ಷಣ್ಮುಖಪ್ಪ, ನಿಂಗಪ್ಪ, ನೀತಿಗೆರೆ ಲಿಂಗೇಶ್, ಕಿರಣ್, ರಂಗಪ್ಪ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ರೈತರು ಹಾಜರಿದ್ದರು.