ಆಧುನಿಕ ತಂತ್ರಜ್ಞಾನ ಕ್ಯಾಪ್ಸುಲ್ಎಂಡೋಸ್ಕೋಪಿ ಕಾರ್ಯವಿಧಾನ ಬಳಕೆ
ದಾವಣಗೆರೆ, ಜ.7- ರೋಗಿಗೆ ಸಣ್ಣ ಕರುಳಿನಲ್ಲಿ ಉಂಟಾದ ಅತಿ ಅಪರೂಪದ ರಕ್ತ ಸ್ರಾವವನ್ನು ಆಧುನಿಕ ತಂತ್ರಜ್ಞಾನವಾದ ಕ್ಯಾಪ್ಸುಲ್ ಎಂಡೋಸ್ಕೋಪಿ ಕಾರ್ಯ ವಿಧಾನದಿಂದ ಪತ್ತೆ ಹಚ್ಚಿ ತುರ್ತಾಗಿ ಬೇಕಾದಂತಹ ಚಿಕಿತ್ಸೆಯನ್ನು ನಂಜಪ್ಪ ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಯಶಸ್ವಿಯಾಗಿ ನೀಡಿದೆ.
62 ವರ್ಷದ ವ್ಯಕ್ತಿ ಶಕ್ತಿ ಹೀನನಾಗಿ ದುರ್ಬಲತೆ ಯಿಂದ ಬಳಲುತ್ತಿದ್ದು, 4-5 ದಿನಗಳಿಂದ ಕಪ್ಪು ಬಣ್ಣದ ಮಲ ವಿಸರ್ಜನೆಯಾಗುತ್ತಿತ್ತು. ವ್ಯಕ್ತಿಯು ಆಸ್ಪತ್ರೆಗೆ ದಾಖಲಾದಾಗ, ಹೀಮೋಗ್ಲೋಬಿನ್ ಮಟ್ಟ ಬಹಳ ಕಡಿಮೆ ಇತ್ತು. ಪ್ರಾರಂಭದಲ್ಲಿ ರಕ್ತಸ್ರಾವದ ಮೂಲವನ್ನು ಕಂಡುಹಿಡಿಯಲು ಕಷ್ಟಕರವಾಗಿದ್ದರಿಂದ ಕ್ಯಾಪ್ಸುಲ್ಎಂಡೋಸ್ಕೋಪಿ ವಿಧಾನವನ್ನು ಬಳಸಲಾಯಿತು.
ಈ ವಿಧಾನವು ಅತ್ಯಂತ ಪರಿಣಾಮಕಾರಿ ಯಾಗಿದ್ದು, ನಿಖರವಾಗಿ ಚಿಕಿತ್ಸೆ ನೀಡಲು ಬಹಳ ಸಹಕಾರಿಯಾಗಿದೆ. ಗ್ಯಾಸ್ಟ್ರೋಎಂಟಿರೊಲೋ ಜಿಸ್ಟ್ ವೈದ್ಯ ಡಾ. ಶಿವರಾಜ್ ಅಫ್ಜಲ್ಪುರ್ಕರ್ ಈ ವಿಧಾನವೇ ಸೂಕ್ತವೆಂದು ನಿರ್ಣಯಿಸಿ ರಕ್ತಸ್ರಾವದ ಮೂಲವನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದರು. ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಿದರು.
ಫಲಿತಾಂಶ : ಕ್ಯಾಪ್ಸುಲ್ಎಂಡೋಸ್ಕೋಪಿ ಇತ್ತೀಚಿನ ತಂತ್ರಜ್ಞಾನವಾಗಿದ್ದು, ಜೀರ್ಣಾಂಗ ವ್ಯೂಹದ ವಿಶೇಷವಾಗಿ ಸಣ್ಣ ಕರುಳಿನಲ್ಲಿ ಉಂಟಾದ ತೊಂದರೆಗಳನ್ನು ಕಂಡುಹಿಡಿಯಲು ಸಹಾಯವಾ ಗುತ್ತದೆ. ರೋಗಿಗೆ ವೈರ್ಲೆಸ್ ಕ್ಯಾಮೆರಾವನ್ನು ಹೊಂದಿರುವ ಮಾತ್ರೆ ಗಾತ್ರದ ಕ್ಯಾಪ್ಸುಲ್ ಅನ್ನು ನುಂಗಿಸಿದಾಗ, ಅದು ಕರುಳಿಗೆ ಹೋಗುತ್ತದೆ. ನಂತರ ಆ ಕ್ಯಾಪ್ಸುಲ್ ಕರುಳಿನ ಭಾಗದಲ್ಲಿ ಉಂಟಾದ ರಕ್ತಸ್ರಾವ ಹಾಗೂ ಇನ್ನಿತರೆ ಸಮಸ್ಯೆಗಳ ಚಿತ್ರಗಳನ್ನು ಸೆರೆ ಹಿಡಿದು ರೆಕಾರ್ಡಿಂಗ್ ಸಾಧನಕ್ಕೆ ರವಾನಿಸುತ್ತದೆ. ಇದರಿಂದ ವೈದ್ಯರು ಖಚಿತವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ.
ದಾವಣಗೆರೆ ನಂಜಪ್ಪ ಆಸ್ಪತ್ರೆಯಲ್ಲಿ ನವೀನತೆ ಹಾಗೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿರುವುದನ್ನು ಈ ವಿಧಾನವು ತೋರಿಸುತ್ತದೆ.