ಹರಿಹರದಲ್ಲಿ ಜರುಗಿದ `ಚರಿತ್ರೆ ಮತ್ತು ದಾಖಲೆಗಳು’ ವಿಚಾರ ಸಂಕಿರಣದಲ್ಲಿ ಶಾಸಕ ಬಿ.ಪಿ ಹರೀಶ್ ಕಳವಳ
ಇತಿಹಾಸ ತಿಳಿಸಬೇಕು
`ಜಿಲ್ಲೆಯ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು. ಮೈಸೂರು ಸಂಸ್ಥಾನದ ಆಳ್ವಿಕೆ, ದಾವಣಗೆರೆ ಭಾಗದ ಜನರ ಅಭಿವೃದ್ಧಿಗೆ ಸಾಕಷ್ಟು ಸಹಾಯ ಮಾಡಿದೆ’
ಪ್ರೊ.ಬಿ.ಡಿ.ಕುಂಬಾರ,
ಕುಲಪತಿಗಳು, ದಾವಣಗೆರೆ ವಿವಿ.
ಹರಿಹರ,ಜ.6- ಇತಿಹಾಸದ ಅಂಶಗಳನ್ನು ರಾಜಕೀಯಗೊಳಿಸುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದು ಸಾಮಾಜಿಕ ನೆಮ್ಮದಿಗೂ ಭಂಗವನ್ನುಂಟು ಮಾಡುತ್ತಿದೆ ಎಂದು ಶಾಸಕ ಬಿ.ಪಿ ಹರೀಶ್ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಪತ್ರಾಗಾರ ಇಲಾಖೆಯ ಸಹಯೋಗದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ `ವಸಾಹತು ಕಾಲದಲ್ಲಿನ ಮಧ್ಯ ಕರ್ನಾಟದ ಚರಿತ್ರೆ ಮತ್ತು ದಾಖಲೆಗಳು’ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಸಾಕಷ್ಟು ಐತಿಹಾಸಿಕ ಸತ್ಯಗಳನ್ನು ಹೇಳಲು ಭಾವನಾತ್ಮಕ ಕಾರಣಗಳು ಅಡ್ಡಿಯಾಗುತ್ತಿವೆ. ಆದರೆ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯಂತಹ ಇತಿಹಾಸದ ವಾಸ್ತವತೆಗಳನ್ನು ಜನರು ಸಮಚಿತ್ತದಿಂದ ಸ್ವೀಕರಿಸಬೇಕು. ಅವುಗಳನ್ನು ಆಯಾ ಕ್ಷೇತ್ರದ ತಜ್ಞರು ಸಮಾಜಕ್ಕೆ ಸ್ವೀಕೃತವಾಗುವಂತೆ ಅರ್ಥ ಮಾಡಿಸಬೇಕು. ಇತಿಹಾಸ ಕೆಲವು ಅಂಶಗಳನ್ನು ರಾಜಕಾರಣಿಗಳು ಪ್ರಸ್ತಾಪಿಸಿದರೆ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆಪಾದನೆ ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ, ಇಂದಿನ ಜಾಗತಿಕ ಸ್ಪರ್ಧಾತ್ಮಕ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರವು ಸಾಕಷ್ಟು ಸುಧಾರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರು ವುದು ಸ್ವಾಗತಾರ್ಹ ಎಂದು ಹೇಳಿದರು.
ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನದ ವಿಕಾಸಕ್ಕೆ ಶೈಕ್ಷಣಿಕ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಸಹಕಾರಿಯಾಗಲಿವೆ. ಜಿಲ್ಲೆಯ ಇತಿಹಾಸದ ವಿಷಯಗಳನ್ನು ಶೈಕ್ಷಣಿಕ ಪಠ್ಯದಲ್ಲಿ ಸೇರಿಸುವ ಮೂಲಕ, ಸ್ಥಳೀಯ ಚರಿತ್ರೆಯನ್ನು ಇಲ್ಲಿನ ಯುವ ಪೀಳಿಗೆಗೆ ತಿಳಿಯ ಪಡಿಸುವ ಕಾರ್ಯವಾಗಲಿ.
ಮೈಸೂರು ಸಂಸ್ಥಾನದ ಆಳ್ವಿಕೆ ದಾವಣಗೆರೆ ಭಾಗದ ಜನರ ಅಭಿವೃದ್ಧಿಗೆ ಸಾಕಷ್ಟು ಸಹಾಯ ಮಾಡಿದೆ. ಸ್ಥಳೀಯ ಆಳ್ವಿಕೆಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಆಡಳಿತಾತ್ಮಕ ಅಭಿವೃದ್ಧಿ ಕಾರ್ಯಗಳ ದಾಖಲೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಗುರುತರ ಜವಾಬ್ದಾರಿ ಇತಿಹಾಸ ಅಧ್ಯಾಪಕರ ಮೇಲಿದೆ ಎಂದು ತಿಳಿಸಿದರು.
ಕರ್ನಾಟಕ ಪತ್ರಾಗಾರ ಇಲಾಖೆಯ ಉಪನಿರ್ದೇಶ ಡಾ.ನೆಲ್ಕುದ್ರಿ ಸದಾನಂದ ಅವರು ಮಾತನಾಡಿ, ದೇಶದ ಎಲ್ಲಾ ಪ್ರಾಚೀನ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ಉದ್ದೇಶದಿಂದ ಪತ್ರಾಗಾರ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ದೇಶ- ರಾಜ್ಯದ ಚರಿತ್ರೆ ದೇಶದ ಅಭಿವೃದ್ಧಿಯಲ್ಲಿ ನಿರ್ವಹಿಸುವ ಪಾತ್ರದ ಹಿನ್ನೆಲೆಯನ್ನು ಯುವಜನತೆಗೆ ಮುಟ್ಟಿಸುವ ಕಾರಣದಿಂದ ಈ ಬಗೆಯ ವಿಚಾರ ಸಂಕಿರಣಗಳು ಮಹತ್ವವಾಗಿವೆ.
2 ಕೋಟಿಗೂ ಹೆಚ್ಚು ದೇಶದ ದಾಖಲೆಗಳನ್ನು, 420 ರಷ್ಟು ಖಾಸಗಿ ದಾಖಲೆಗಳನ್ನು ಇಲಾಖೆ ಸಂಗ್ರಹಿಸಿ, ಅವುಗಳ ಡಿಜಿಟಲೀಕರಣವನ್ನು ಮಾಡಿದೆ. 50 ಲಕ್ಷದಷ್ಟು ವೃತ್ತ ಪತ್ರಿಕೆಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಹೆಚ್.ವಿರುಪಾಕ್ಷಪ್ಪ, ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ.ಸಿ.ಹೆಚ್.ಮುರುಗೇಂದ್ರಪ್ಪ ಅವರು ಮಾತನಾಡಿದರು. ಕನ್ನಡ ವಿವಿ ಇತಿಹಾಸ ಪ್ರಾಧ್ಯಾಪಕ ಡಾ.ವಾಸುದೇವ ಬಡಿಗೇರ ಆಶಯ ಭಾಷಣ ಮಾಡಿದರು.
ಕಾಲೇಜಿನ ಐ.ಕ್ಯೂ.ಎಸ್.ಸಿ ಸಂಯೋಜಕ ಡಾ.ಅನಂತನಾಗ್ ಹೆಚ್.ಸಿ, ದಾವಣಗೆರೆ ವಿವಿ ಇತಿಹಾಸ ಅಧ್ಯಾಪಕರ ವೇದಿಕೆ ಅಧ್ಯಕ್ಷ ಸಿ.ಜಗದೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೊದಲ ಗೋಷ್ಠಿ: ದಾವಣಗೆರೆ ವಿವಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ವೆಂಕಟರಾವ್ ಪಲಾಟೆ ಅವರ ಅಧ್ಯಕ್ಷತೆಯಲ್ಲಿ ಗುಲ್ಬರ್ಗಾ ವಿವಿಯ ವಿಶ್ರಾಂತ ಇತಿಹಾಸದ ಪ್ರಾಧ್ಯಾಪಕ ಡಾ.ಬಿ.ಸಿ.ಮಹಾಬಲೇಶ್ವರಪ್ಪ ಅವರು `ಸ್ವಾತಂತ್ರ್ಯ ಸಂಗ್ರಾಮ-ಒಂದು ವಿಶ್ಲೇಷಣೆ’ ಎಂಬ ವಿಷಯ ಮಂಡಿಸಿದರು.
ಎರಡನೆಯ ಗೋಷ್ಠಿ: ಬಸವಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಮಂಜಣ್ಣ ಅಧ್ಯಕ್ಷತೆಯಲ್ಲಿ ದಾವಣಗೆರೆ ವಿವಿ ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ.ಪಿ.ನಾಗಭೂಷಣ ಗೌಡ ಅವರು `ಮಧ್ಯ ಕರ್ನಾಟದಲ್ಲಿ ಅರಣ್ಯ ಸತ್ಯಾಗ್ರಹ’ ಎಂಬ ವಿಷಯದ ಪತ್ರಿಕೆ ಮಂಡಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಹೊನ್ನೂರು ಸ್ವಾಮಿ ಅಧ್ಯಕ್ಷತೆಯಲ್ಲಿ ಸಂಶೋಧನಾ ಲೇಖನಗಳು ಮಂಡನೆಯಾದವು. ಸಂತೇಬೆನ್ನೂರು ಕಾಲೇಜಿನ ಸಹ ಪ್ರಾಧ್ಯಾಪಕ ಎನ್.ಮಲ್ಲಯ್ಯ ಗೋಷ್ಠಿಯನ್ನು ನಿರ್ವಹಿಸಿದರು.
ಬಿ.ಎ ವಿದ್ಯಾರ್ಥಿನಿ ಕು.ಅರ್ಪಿತಾ ಪ್ರಾರ್ಥಿಸಿ ದರು. ಇತಿಹಾಸ ಉಪನ್ಯಾಸಕ ಎ.ರಾಜಪ್ಪ ಅತಿಥಿಗಳ ಪರಿಚಯ ಮಾಡಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೆಚ್.ತಿಪ್ಪೇಸ್ವಾಮಿ ಸ್ವಾಗತಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಂ.ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಾಬು ಕೆ.ಎ. ವಂದಿಸಿದರು.